ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಸಂಭವಿಸಿದ ಅನುಮಾನಾಸ್ಪದ ಸಾವುಗಳು, ಭಯ ಹುಟ್ಟಿಸುವ ಗುಪ್ತ ಸಮಾಧಿ ಪ್ರಕರಣಗಳು ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ. ಎಸ್. ದ್ವಾರಕಾನಾಥ್ ಅವರ ನೇತೃತ್ವದ ವಕೀಲರ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ‘ಕಾವೇರಿ’ ನಿವಾಸದಲ್ಲಿ ಭೇಟಿಯಾಗಿ ವಿಶೇಷ ತನಿಖಾ ತಂಡ (SIT) ರಚನೆಗೆ ಒತ್ತಾಯಿಸಿದೆ.
ಮಹಿಳಾ ಆಯೋಗ ಮತ್ತು ಕೇಂದ್ರ ಸಚಿವರ ಬೆಂಬಲ
ಈ ಪ್ರಕರಣದ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕೂಡ ಮುಖ್ಯಮಂತ್ರಿಗೆ ಪತ್ರ ಬರೆದು, ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣಾ ದೇವಿ ಸಹ ಕೇಂದ್ರದ ಮಟ್ಟದಲ್ಲಿ ತನಿಖೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸೌಜನ್ಯ ಪರ ಹೋರಾಟಗಾರರು ಮತ್ತು ಸೌಜನ್ಯ ಪರ ಹೋರಾಟಗಾರರ ವಿರೋಧಿಗಳ ನಡುವೆ ಮತ್ತೊಮ್ಮೆ ವಾಕ್ಸಮರ ಆರಂಭವಾಗಿದ್ದು, ಧರ್ಮಸ್ಥಳ ಸಮೀಪ ಹಲವಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಗಳನ್ನು ಪತ್ರದ ಮೂಲಕ ಮತ್ತು ವಕೀಲರ ಜೊತೆ ಭೇಟಿಯಾದ ನಂತರ ಬೆಂಕಿಗೆ ತುಪ್ಪ ಸುರಿದಂತಾಗಿದೆ.