27 July 2025 | Join group

ಚಾಲಕರಿಗೆ ಎಚ್ಚರಿಕೆ: ಕುದ್ರೆಬೆಟ್ಟುವಿನಲ್ಲಿ ಸರಣಿ ಅಪಘಾತ – ನಿಂತ ನೀರು ಅಪಾಯಕ್ಕೆ ಕಾರಣ, ಇಲಾಖೆಗೆ ತಕ್ಷಣ ಕ್ರಮಕ್ಕೆ ಒತ್ತಾಯ

  • 26 Jul 2025 12:11:01 PM

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನ ರಾ.ಹೆ 75ರಲ್ಲಿ ನೀರು ನಿಂತ ಪರಿಣಾಮ ಒಂದೇ ದಿನದಲ್ಲಿ ಎರಡು ಅಪಘಾತಗಳು ನಡೆದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಬಹಳ ಅಗಲವಾಗಿ ಅಭಿವೃದ್ದಿಗೊಂಡಿರುವ ಚತುಷ್ಪಥ ಹೆದ್ದಾರಿಯಲ್ಲಿ ಮಳೆ ನೀರು ನಿಂತ ಪರಿಣಾಮ ವೇಗವಾಗಿ ಬರುವ ವಾಹನಗಳು ನಿಯಂತ್ರಣ ಕಳೆದುಕೊಂಡು ಅಪಘಾತ ನಡೆಯುತ್ತಿದೆ.

 

ಶುಕ್ರವಾರ ಮುಂಜಾನೆ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಾರು, ಕುದ್ರೆಬೆಟ್ಟುವಿನಲ್ಲಿ ನಿಂತ ನೀರಿನಲ್ಲಿ ಚಲಿಸಿದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೇ ರೀತಿಯಾಗಿ ಸಂಜೆ ಸೂರಿಕುಮೇರ್ ಕಡೆಯಿಂದ ಬಂದ ಆಂಬುಲೆನ್ಸ್ ಕೂಡ ಆ ಸ್ಥಳದಲ್ಲಿ ನಿಂತ ನೀರಿನ ಮೇಲೆ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಡಿವೈಡರ್ ಗೆ ಡಿಕ್ಕಿಯಾಗಿದೆ.

 

ಈ ಎರಡು ಘಟನೆಗಳು ಕುದುರೆಬೆಟ್ಟುವಿನ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮವಾಗಿ ಸಂಭವಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಘಡಗಳು ಸಂಭವಿಸಿ ಪ್ರಾಣಹಾನಿಯ ಸಾಧ್ಯತೆ ಇದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

 

ಮಳೆಗಾಲದಲ್ಲಿ ಕಾಂಕ್ರೀಟ್ ರಸ್ತೆ ಸುರಕ್ಷಿತವಾಗಿದೆಯೆಂದು ಭಾವಿಸಿ ಅತಿವೇಗದಲ್ಲಿ ವಾಹನ ಚಲಾಯಿಸುವ ಚಾಲಕರು, ಈ ಘಟನೆಗಳಿಂದ ಪಾಠ ಕಲಿತು, ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ವಾಹನ ಚಲಾಯಿಸಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ.