27 July 2025 | Join group

ನಾಗರಹಾವಿಗೆ ಕಚ್ಚಿದ ಒಂದು ವರ್ಷದ ಮಗು: ಹಾವು ಸಾವು, ಮಗು ಸೇಫ್! - ಬೆಚ್ಚಿಬೀಳಿಸಿದ ಘಟನೆ

  • 27 Jul 2025 12:35:37 AM

ವಿಷಪೂರಿತ ನಾಗರಹಾವುಗಳನ್ನು ಹಿಡಿಯುವ ವಿಡಿಯೋ ಇತ್ತೀಚಿನ ದಿನಗಳಲ್ಲಿ ಯುಟ್ಯೂಬ್ ಗಳಲ್ಲಿ ಬಹಳಷ್ಟು ಹರಿದಾಡುತ್ತದೆ. ಅಂತಹ ವಿಡಿಯೋಗಳನ್ನು ವೀಕ್ಷಣೆ ಮಾಡುವಾಗಲೇ ಹೆದರಿಕೆಯಾಗುವ ನಮಗೆ, ವಿಷಭರಿತ ಹಾವಿಗೆ ಕಚ್ಚಿ ಹಾವನ್ನೇ ಸಾಯಿಸಿದ ಪುಟ್ಟ ಮಗುವಿನ ಕಥೆ ಹೇಗಿರಬಹುದು.

 

ಅಂತಹ ಒಂದು ಆಶ್ಚರ್ಯಕರ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಗೋವಿಂದ ಎಂಬ ಮಗು ಆಟಿಕೆ ಸಾಮಗ್ರಿ ಎಂದು ಭಾವಿಸಿ ನಾಗರಹಾವಿಗೆ ಕಚ್ಚಿದ್ದಾನೆ. ಕಚ್ಚಿದ ಕೆಲ ನಿಮಿಷಗಳಲ್ಲೇ ನಾಗರಹಾವು ಸತ್ತುಹೋಗಿದೆ.

 

ಬಿಹಾರದ ಚಂಪಾರಣ್ ಜಿಲ್ಲೆಯ ಮಜೌಲಿಯಾ ಬ್ಲಾಕ್‌ನ ಮೊಹಾಚಿ ಬಂಕತ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಚ್ಚಿದ ಕೆಲವು ಗಂಟೆಗಳ ನಂತರ, ಮಗು ಕೂಡ ಪ್ರಜ್ಞೆ ತಪ್ಪಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಮಗು ಪ್ರಾಣಾಪಾಯದಿಂದ ಹೊರಗಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ.

 

ಶುಕ್ರವಾರ ಮಧ್ಯಾಹ್ನ ವಿಷಭರಿತ ನಾಗರಹಾವು ಮನೆಗೆ ಬಂದಿದ್ದು, ಮಗು ಆಟಿಕೆ ಎಂದು ಭಾವಿಸಿ ಹಾವನ್ನು ಹಿಡಿದು ಕಚ್ಚಿದೆ. ಮಗುವು ಹಾವನ್ನು ಕಚ್ಚಿ ಎರಡು ತುಂಡುಗಳಾಗಿ ಕತ್ತರಿಸಿದೆ ಎಂದು ಹೇಳಲಾಗಿದೆ. ಮಗುವಿಗೆ ಯಾವುದೇ ವಿಷಪ್ರಾಶನದ ಲಕ್ಷಣಗಳು ಕೂಡ ಕಂಡುಬಂದಿಲ್ಲ ಎಂದು ಮಗುವನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ಆಘಾತಕಾರಿ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.