30 July 2025 | Join group

ಭರತನಾಟ್ಯದಲ್ಲಿ ವಿಶ್ವದಾಖಲೆಯ ಸಾಧನೆ ಮಾಡಿದ ಮಂಗಳೂರಿನ ರೆಮೊನಾ ಎವೆಟ್ ಪಿರೇರಾ

  • 28 Jul 2025 07:07:52 PM

ಮಂಗಳೂರು: ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೊನಾ ಎವೆಟ್ ಪಿರೇರಾ ನಿರಂತರ 7 ದಿನಗಳ ಕಾಲ ಭರತನಾಟ್ಯ ನೃತ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.

 

ರೆಮೊನಾ 170 ಗಂಟೆಗಳ ಕಾಲ ಭರತನಾಟ್ಯ ಮಾಡುವ ಮೂಲಕ ಈ ಮೈಲುಗಲ್ಲು ಸಾಧಿಸಿದ ವಿಶ್ವದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜುಲೈ 21 ರಂದು ಆರಂಭವಾಗಿ ಜುಲೈ 28 ರವರೆಗೆ ನಡೆದ ಈ ಸಾಧನೆಯು, ಈ ಹಿಂದೆ 2023 ರಲ್ಲಿ ಸುಧೀಪ್ ಜಗಪತ್ ಸಾಧಿಸಿದ್ದ 127 ಗಂಟೆಗಳ ದಾಖಲೆಯನ್ನು ಮುರಿದಿದ್ದಾರೆ.

 

ಶ್ರೀ ಗುರು ಶ್ರೀ ವಿದ್ಯಾ, ಯೆಯ್ಯಾಡಿಯಲ್ಲಿ ಕಳೆದ 13 ವರ್ಷಗಳಿಂದ ತರಬೇತಿ ಪಡೆದ ನೃತ್ಯಗಾರ್ತಿ ರೆಮೊನಾ, ತನ್ನ ಶ್ರಮ ಮತ್ತು ಶಿಸ್ತಿನಿಂದ ಈ ಸಾಧನೆಗೆ ಭಾಜನರಾಗಿದ್ದಾರೆ. 2022 ರಲ್ಲಿ ಪ್ರತಿಷ್ಠಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪಡೆದಿರುತ್ತಾರೆ.

 

ನೃತ್ಯವನ್ನೇ ಉಸಿರಾಗಿಸಿರುವ ರೆಮೊನಾ, ಭರತನಾಟ್ಯ ಜೊತೆ, ಶಾಸ್ತ್ರೀಯ ಪಾಶ್ಚಿಮಾತ್ಯ ಮತ್ತು ಸಮಕಾಲೀನ ನೃತ್ಯಗಳಲ್ಲಿ ತರಬೇತಿ ಪಡೆದಿರುವ ಇವರು, ಈ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಲಂಡನ್ ಮತ್ತು 2017ರಲ್ಲಿ ಭಾರತ್ ಬುಕ್ ಆಫ್ ರೆಕಾರ್ಡ್ ನಲ್ಲಿ ಕಾಣಿಸಿಕೊಂಡಿದ್ದರು.