ಕೋಲಾರ: ಕರ್ನಾಟಕದ ಕೋಲಾರ ಜಿಲ್ಲೆಯ 38 ವರ್ಷದ ಮಹಿಳೆಯೊಬ್ಬರು ಅಪರೂಪದ ರಕ್ತದ ಗುಂಪನ್ನು ಹೊಂದಿರುವ ವಿಶ್ವದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ರೀತಿಯ ಬ್ಲಡ್ ಗ್ರೂಪ್ ವಿಶ್ವದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಇದು ವೈದ್ಯರನ್ನೂ ಅಚ್ಚರಿಗೊಳಿಸಿದೆ.
ಒಂದು ವೇಳೆ ಆಕೆ ಇತರರಿಂದ ರಕ್ತವನ್ನು ಪಡೆಯಬೇಕಾದರೆ, ಅದು ಸಾಧ್ಯವಿಲ್ಲ. ತುರ್ತು ಸಂದರ್ಭಗಳಲ್ಲಿ ಅವಳಿಗಾಗಿಯೇ ಮೊದಲು ರಕ್ತವನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕಾಗುತ್ತದೆ. ಅಂದರೆ, ಅವಳಿಗೆ ಅವಳದೇ ರಕ್ತವು ಜೀವದಾಯಕವಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಈ ಅಪರೂಪದ ರಕ್ತ ಗುಂಪು ಪತ್ತೆಯಾಗುವ ಮೊದಲು, ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು. ಪ್ರಾರಂಭದಲ್ಲಿ ಅವರಿಗೆ ಓ ಪ್ಲಸ್ (O+) ಗುಂಪು ಎಂದು ತಿಳಿದುಬಂದಿತು. ಆದರೆ ಚಿಕಿತ್ಸೆ ಸಕಾರಾತ್ಮಕ ಫಲಿತಾಂಶ ನೀಡದ ಕಾರಣ, ಅವರ ರಕ್ತದ ಮಾದರಿಯನ್ನು ಇಂಗ್ಲೆಂಡಿನ ಬ್ರಿಸ್ಟಲ್‌ಗೆ ಕಳುಹಿಸಲಾಯಿತು.
ಅಲ್ಲಿನ ಪ್ರಯೋಗಾಲಯದಲ್ಲಿ ಆಣ್ವಿಕ ತಂತ್ರಗಳನ್ನು ಬಳಸಿಕೊಂಡು ಸುಮಾರು 10 ತಿಂಗಳ ತನಿಖೆ ನಡೆಸಲಾಯಿತು. ಅಂತಿಮವಾಗಿ, ಆಕೆಯ ರಕ್ತದಲ್ಲಿ ಹೊಸ ಪ್ರಕಾರದ ಪ್ರತಿಜನಕವಿದೆ ಎಂದು ದೃಢಪಡಿಸಲಾಯಿತು. ಈ ಹೊಸ ಪ್ರತಿಜನಕವನ್ನು ಇದೀಗ "ಕ್ರೋಮರ್ (CR)" ರಕ್ತ ಗುಂಪು ವ್ಯವಸ್ಥೆಯ ಭಾಗವಾಗಿ ಗುರುತಿಸಲಾಗಿದೆ.
ಈ ಮೂಲಕ, ಆಕೆ "ಕ್ರೋಮರ್" ಗುಂಪಿಗೆ ಸೇರಿದ ಹೊಸ ಬ್ಲಡ್ ಟೈಪ್ ಹೊಂದಿರುವ ವಿಶ್ವದ ಮೊದಲ ಮಹಿಳೆ ಎಂಬ ಹಿರಿಮೆಪೂರ್ಣ ಸ್ಥಾನವನ್ನು ಪಡೆದಿದ್ದಾರೆ.