ಬೆಳ್ತಂಗಡಿ: ಬಂಗ್ಲೆಗುಡ್ಡೆಯಲ್ಲಿ ವಾಮಾಚಾರ ನಡೆದಿದೆ ಎಂಬ ವಿಠ್ಠಲ ಗೌಡ ಅವರ ಆರೋಪವನ್ನು ಎಸ್ಐಟಿ ತಂಡ ಗಂಭೀರವಾಗಿ ಪರಿಗಣಿಸಿದೆ. ಮೊಹಾಂತಿ ಅವರ ನೇತೃತ್ವದ ಎಸ್ಐಟಿ ತಂಡ, ಬೆಳ್ತಂಗಡಿ ಸುತ್ತಮುತ್ತ ವಾಮಾಚಾರ ಮಾಡುವವರ ಕುರಿತು ಮಾಹಿತಿ ಕಲೆಹಾಕಲು ಸೂಚನೆ ನೀಡಿದೆ.
ವಿಠ್ಠಲ ಗೌಡ ಅವರ ಮನವಿಯ ಮೇರೆಗೆ ಬಂಗ್ಲೆಗುಡ್ಡೆಯಲ್ಲಿ ಅಗೆಯುವ ಪ್ರಕ್ರಿಯೆ ನಡೆಯಿತು. ಆ ವೇಳೆ ಒಂದು ಚಿಕ್ಕ ಮಗುವಿನ ತಲೆಬುರುಡೆ ಹಾಗೂ 4–5 ಕಳಸಗಳು ಪತ್ತೆಯಾಗಿವೆ ಎಂದು ಅವರು ವಿಡಿಯೊ ಮೂಲಕ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಸ್ಐಟಿ ತಂಡ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸರಿಗೆ, ರಕ್ತಬಲಿ ಕೊಟ್ಟು ವಾಮಾಚಾರ ನಡೆಸುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದೆ. ಅಂತಹವರ ಪತ್ತೆ ಹಚ್ಚಿದರೆ ಅವರನ್ನು ಠಾಣೆಗೆ ಕರೆತರಲು ಕೂಡ ಸೂಚಿಸಲಾಗಿದೆ.
ಬಂಗ್ಲೆಗುಡ್ಡೆ ಸುತ್ತಮುತ್ತ ಭದ್ರತೆ ಒದಗಿಸಲಾಗಿದ್ದು, ಅಲ್ಲಿರುವ ಮರಗಳ ಸರ್ವೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೊಮ್ಮೆ ಶೋಧ ಕಾರ್ಯ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.