28 October 2025 | Join group

ಹುಡುಗಿಯರೇ...ನಿಮ್ಮ ಫೋಟೋಗಳನ್ನು ಮೊಬೈಲ್ ಆ್ಯಪ್ ಗಳಿಗೆ ಅಪ್‌ಲೋಡ್ ಮಾಡುವ ಮುಂಚೆ ಯೋಚಿಸಿ!

  • 17 Sep 2025 04:30:13 PM

ಇತ್ತೀಚಿನ ದಿನಗಳಲ್ಲಿ ಪ್ರತಿ ದಿನಕ್ಕೂ ಹೊಸ ಮೊಬೈಲ್ ಆ್ಯಪ್ ಗಳು ನಿಮ್ಮ ಮುಂದೆ ಬರುತ್ತಿವೆ. ಮೊಬೈಲ್‌ಗಳಲ್ಲಿ ಅನೇಕ ಆಪ್‌ಗಳಿರೋ ಈ ಕಾಲದಲ್ಲಿ, ನಮ್ಮ ವೈಯಕ್ತಿಕ ವಿಚಾರಗಳು ಎಷ್ಟು ಸುರಕ್ಷಿತವಾಗಿವೆ, ನಮ್ಮ ಡೇಟಾಗಳು ನಮಗೆ ಮಾತ್ರವೇ ಸೀಮಿತವಾಗಿವೆಯೇ ಅಥವಾ ಬೇರೆ ಯಾವುದೇ ಆ್ಯಪ್ ತಯಾರಿಸುವ ಕಂಪನಿಗಳ ಸರ್ವರ್‌ಗಳಲ್ಲಿ ಸುರಕ್ಷಿತವಾಗಿ ಇರಬಹುದೇ ಎಂಬುದು ನಮಗೆ ತಿಳಿಯದು.

 

ನಮಗೆ ಯಾವ ಆ್ಯಪ್ ಕಾಣಿಸಿಕೊಳ್ಳುತ್ತದೆ, ಅದನ್ನು ಯಾವುದೇ ಡಬಲ್ ಚೆಕ್ ಮಾಡದೆ ಡೌನ್‌ಲೋಡ್ ಮಾಡಿ, ಆ ಆ್ಯಪ್ ಗೆ ಬೇಕಾದ ಎಲ್ಲಾ ವಿವರಗಳನ್ನು ನೀಡುತ್ತೇವೆ. ಅರ್ಥಾತ್, ಯಾವುದೇ ಸರ್ಕಾರಿ ಕಚೇರಿ ಅಥವಾ ವಿಶ್ವಾಸಾರ್ಹ ಸಂಸ್ಥೆಗಳಿಗೆ ನಮ್ಮ ವಿವರಗಳನ್ನು ನೀಡಲು ಹಿಂದೆ ಮುಂದೆ ನೋಡುವ ಯುವ ಜನತೆ, ಇಂತಹ ಮೊಬೈಲ್ ಆ್ಯಪ್ ಗಳು ಅಥವಾ ವೆಬ್‌ಸೈಟ್‌ಗಳಿಗೆ ಕಣ್ಣು ಮುಚ್ಚಿ ನೀಡುತ್ತಿರುವುದು ನಮಗೆ ಅಚ್ಚರಿಯ ಸಂಗತಿ.

 

ಇದೀಗ ಹೊಸದಾಗಿ ಟ್ರೆಂಡಿಂಗ್‌ನಲ್ಲಿರುವ ಸುಂದರವಾದ ಇಮೇಜ್ ಸೃಷ್ಟಿ ಮಾಡುವ ಆ್ಯಪ್ ಗಳು ಬಹಳ ಸದ್ದು ಮಾಡುತ್ತಿವೆ. ಹುಡುಗಿಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ ಫೋಟೋಗಳನ್ನು ಈ ರೀತಿಯ ಆ್ಯಪ್ ಗಳಿಗೆ ಅಪ್‌ಲೋಡ್ ಮಾಡಿ, ಅದರಿಂದ ಬರುವ ಸುಂದರವಾದ ಇಮೇಜ್‌ಗಳನ್ನು ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಳ್ಳುತ್ತಾ ಖುಷಿ ಪಡೆಯುತ್ತಾರೆ.

 

ಐಟಿ ತಜ್ಞರ ಹೇಳಿಕೆಗೆ ತಕ್ಕಂತೆ, ಈ ರೀತಿ ನಿಜವಾದ ಫೋಟೋಗಳನ್ನು ಯಾವುದೇ ಅನಾಮಧೇಯ ಮೊಬೈಲ್ ಆ್ಯಪ್ ಗಳಲ್ಲಿ ಅಪ್ಲೋಡ್ ಮಾಡುವುದರಿಂದ ಅದರ ದುರುಪಯೋಗ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಯುವತಿಯರು ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಿ ಕೆಲವೇ ಸೆಕೆಂಡುಗಳಲ್ಲಿ ಸುಂದರವಾದ ಫೋಟೋ ಮಾಡುವ ಆ್ಯಪ್ ಗಳಿಗೆ, ಆ ಫೋಟೋವನ್ನು ಬೆತ್ತಲೆ ಅಥವಾ ಅರೆ ಬೆತ್ತಲೆ ಮಾಡಲು ಸಾಮರ್ಥ್ಯವೂ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

 

ಅಲ್ಲದೆ, ಈ ರೀತಿಯಾಗಿ ಫೋಟೋಗಳನ್ನು ಅಪ್‌ಲೋಡ್ ಮಾಡುವುದರಿಂದ ಡೇಟಾ ಕಳ್ಳತನವೂ ಸಂಭವಿಸಬಹುದೆಂದು ಎಚ್ಚರಿಸುತ್ತಾರೆ. ಆದ್ದರಿಂದ, ಯುವತಿಯರು ಎಚ್ಚರಿಕೆಯಿಂದ ಈ ರೀತಿಯ ಆ್ಯಪ್ ಗಳನ್ನೂ ಬಳಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹಲವಾರು ಯುವತಿಯರ ಫೋಟೋಗಳು ಹರಿದಾಡುತ್ತಿದ್ದು, ಅದರಿಂದ ಎಚ್ಚರಿಕೆಯಿಂದ ಇರಬೇಕಾದ ಸಂದೇಶವೂ ಹರಡುತ್ತಿದೆ.