ಬೆಂಗಳೂರು: ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸರು, ಲೋಗೋ, ಲಾಂಛನ ಹಾಕುವುದನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಕೆಲ ಕಾರು ಮಾಲೀಕರು ತಮ್ಮ ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ವಾಹನಗಳ ನಂಬರ್ ಪ್ಲೇಟ್ ಮೇಲೆ, ನಾನು ಆ ಸಂಘದ ಅಧ್ಯಕ್ಷ, ಈ ಸಂಘದ ಅಧ್ಯಕ್ಷ ಎಂದು ಬರೆಸಿಕೊಂಡು ಬಿಲ್ಡಪ್ ಕೊಟ್ಟರೆ ಇನ್ಮುಂದೆ ಆರ್ಟಿಒ (RTO) ಅಧಿಕಾರಿಗಳು ದಂಡ ವಿಧಿಸಲಿದ್ದಾರೆ.
ನಂಬರ್ ಪ್ಲೇಟ್ನಲ್ಲಿ ಹೆಸರು, ಲಾಂಛನ ಹಾಕಿ ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿ 500 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘನೆಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ.





