ವರ್ಷದ ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21 ರಂದು ನಡೆಯಲಿದೆ. ಪಿತೃಪಕ್ಷದ ಅಮಾವಾಸ್ಯೆಯ ದಿನವಾದ ಸೆ. 21ರಂದು ಸಂಭವಿಸಲಿರುವ ಸೂರ್ಯಗ್ರಹಣವು 2025ರ ಎರಡನೇ ಮತ್ತು ಕೊನೇ ಗ್ರಹಣವಾಗಿರಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಮಾರ್ಚ್ 29ರಂದು ನಡೆದಿದೆ.
ಭೂಮಿ ಮತ್ತು ಸೂರ್ಯನ ನಡುವೆ ಸಮಾನಾಂತರ ರೇಖೆಯಲ್ಲಿ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೆ.21ರಂದು ರಾತ್ರಿ 11ಗಂಟೆಯಿಂದ ಮರುದಿನ ಮುಂಜಾನೆ 3.23ರವರೆಗೆ ಸೂರ್ಯಗ್ರಹಣ ಇರಲಿದೆ. ಈ ಸಲ ಆಗುತ್ತಿರುವುದು ಭಾಗಶಃ ಅಥವಾ ಖಂಡಗ್ರಾಸ ಸೂರ್ಯಗ್ರಹಣ. ಅಂದರೆ ಚಂದ್ರನ ನೆರಳು ಸೂರ್ಯನ ಒಂದು ಭಾಗಕ್ಕೆ ಮಾತ್ರ ಆವರಿಸುತ್ತದೆ. ಸೆ.7ರ ಚಂದ್ರಗ್ರಹಣವು ಭಾರತದಾದ್ಯಂತ ಕಾಣಿಸಿತ್ತು. ಆದರೆ ಸೆ.21ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರ ಆಗೋದಿಲ್ಲ.
ಸೆ.21ರ ಖಂಡಗ್ರಾಸ ಸೂರ್ಯಗ್ರಹಣವು ʼಅಮೇರಿಕನ್ ಸಮೋವಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಕುಕ್ ಐಸ್‌ಲ್ಯಾಂಡ್, ಫಿಜಿ, ಫ್ರೆಂಚ್ ಪೋಲಿನೇಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಓಷಿಯಾನಿಯಾ ಮತ್ತಿತರ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ. ಈ ಸಲ ಸೂರ್ಯನಿಗೆ ಗ್ರಹಣ ಸಂಭವಿಸುವ ಸಮಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ. ಅಂದರೆ ಭಾರತದಲ್ಲಿ ಸೂರ್ಯ ಅದಾಗಲೇ ಅಸ್ತಂಗತನಾಗಿರುತ್ತಾನೆ. ಹೀಗಾಗಿ ಸೂರ್ಯಗ್ರಹಣ ಗೋಚರವಿಲ್ಲ.





