25 October 2025 | Join group

ಯುವಕರ ಹೃದಯಘಾತ ಸಾವುಗಳು ರಾಜ್ಯದ ಭೀತಿಯ ವಿಷಯ – ದ.ಕ ಮತ್ತು ರಾಜ್ಯದ ಇತ್ತೀಚಿನ ಅಂಕಿಅಂಶಗಳ ಬೆಳಕು

  • 22 Sep 2025 07:38:10 PM

ಮಂಗಳೂರು: ಆರೋಗ್ಯವಂತ ಯುವಕರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಅನೇಕ ಘಟನೆಗಳು ರಾಜ್ಯದಲ್ಲಿ ಆತಂಕ ಮೂಡಿಸಿವೆ. ಕೆಲ ತಿಂಗಳ ಹಿಂದೆ ಹಾಸನದಲ್ಲಿ ನಿರಂತರ ಹೃದಯಾಘಾತ ಮರಣಗಳು ವರದಿಯಾಗಿದ್ದು, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು.

 

ಈ ಸಮಸ್ಯೆಯನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿದೆ. ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಾವುಗಳು ವ್ಯಾಪಕ ಕಳವಳಕ್ಕೆ ಕಾರಣವಾಗಿವೆ. ಜನಪ್ರಿಯ ನಟರು ಪುನೀತ್ ರಾಜಕುಮಾರ್ ಮತ್ತು ಚಿರಂಜೀವಿ ಅವರ ಅಕಾಲಿಕ ಸಾವುಗಳು ಇನ್ನೂ ಜನರ ಮನಸಿನಲ್ಲಿ ತಾಜಾ ನೆನಪಾಗಿವೆ. ನಿರಂತರ ಇಂತಹ ಸುದ್ದಿಗಳು ಜನರನ್ನು ಭಯದಲ್ಲಿ ಬದುಕುವಂತೆ ಮಾಡುತ್ತಿದೆ.

 

ಹೊಸ ರಿಪೋರ್ಟ್ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಹೃದಯಾಘಾತದಿಂದ ಒಟ್ಟು 1004 ಸಾವುಗಳು ದಾಖಲಾಗಿವೆ. ಇತ್ತೀಚೆಗೆ ಮನೆಯ ಸಂಭ್ರಮದಲ್ಲಿ ಭಾಗವಹಿಸಿದ್ದ ಕಾಮಿಡಿ ನಟ ರಾಕೇಶ್ ಪೂಜಾರಿ ಹಠಾತ್ ಸಾವನ್ನಪ್ಪಿದರು. ಅದೇ ರೀತಿ ಗಣೇಶ ವಿಸರ್ಜನೆ ವೇಳೆ ಡಿಜೆ ನೃತ್ಯ ಮಾಡುವಾಗ ಇಬ್ಬರು ಯುವಕರು ಕುಸಿದು ಬಿದ್ದು ಪ್ರಾಣ ಕಳೆದುಕೊಂಡ ದುರಂತ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

 

ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ, ಧಾರವಾಡ ಮತ್ತು ಚಿಕ್ಕಮಂಗಳೂರಿನಲ್ಲಿ 2023-24ರಲ್ಲಿ ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ 2024-25ರಲ್ಲಿ ದ.ಕ.ದಲ್ಲಿ 33, 2025-26ರಲ್ಲಿ 6 ಸಾವುಗಳು ವರದಿಯಾಗಿವೆ. ಚಿಕ್ಕಮಂಗಳೂರಿನಲ್ಲಿ 2024-25ರಲ್ಲಿ 20, 2025-26ರಲ್ಲಿ 6 ಪ್ರಕರಣಗಳು ದಾಖಲಾಗಿವೆ. ಧಾರವಾಡದಲ್ಲಿ 2024-25ರಲ್ಲಿ 39, 2025-26ರಲ್ಲಿ 6 ಸಾವುಗಳು ವರದಿಯಾಗಿವೆ.

 

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ — ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ವ್ಯಾಯಾಮ ಮಾಡುವವರು, ಶಿಸ್ತುಬದ್ಧ ಜೀವನ ನಡೆಸುವವರೇ ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಕುರಿತಂತೆ ಸರಕಾರ ಮತ್ತು ಆರೋಗ್ಯ ತಜ್ಞರು ಸ್ಪಷ್ಟ ಕಾರಣ ಪತ್ತೆ ಹಚ್ಚದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಕಾಲಿಕ ಸಾವುಗಳನ್ನು ನೋಡಬೇಕಾಗುವ ಆತಂಕ ವ್ಯಕ್ತವಾಗಿದೆ