ಮಂಗಳೂರು: ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾದರ ಪರಿಷ್ಕರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ತಪ್ಪು ಪ್ರಚಾರ ಹರಿದಾಡುತ್ತಿದೆ ಎಂದು ಆರೋಪಿಸಲಾಗಿದೆ. ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಾಗಿ ಸರ್ಕಾರಕ್ಕೆ ಕಳಿಸುತ್ತಿದ್ದಾರೆ ಎಂಬ ವದಂತಿಯನ್ನು ಕೆಲವರು ಹಬ್ಬಿಸಿದ್ದಾರೆ. ಕಾಣಿಕೆ ಹಾಕಬೇಡಿ, ಹೂ ಮತ್ತು ಎಳೆನೀರು ಮಾತ್ರ ಅರ್ಪಿಸಿ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ, ದೇವಸ್ಥಾನದ ಟ್ರಸ್ಟಿ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಅವರು ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿ ಹೀಗೆ ಹೇಳಿದ್ದಾರೆ:
“ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಕಟೀಲಿನ ಸೇವಾದರ ಪರಿಷ್ಕರಣೆಗೆ ತುಳುಕು ಹಾಕುತ್ತಾ ಇದ್ದಾರೆ. ಅವರ ಗ್ಯಾರಂಟಿ ಯೋಜನೆಗೆ ದೇವಸ್ಥಾನದಿಂದ ಹಣವನ್ನು ಸಂಗ್ರಹಿಸುವುದಕ್ಕೋಸ್ಕರ ಸೇವಾದರವನ್ನು ಪರಿಷ್ಕರಣೆ ಮಾಡಲಾಗಿದೆ ಎನ್ನುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಅಪಪ್ರಚಾರಗಳನ್ನು ಮಾಡಿ, ದೇವಸ್ಥಾನಕ್ಕೆ ಯಾರು ಕಾಣಿಕೆ ಹಾಕಬೇಡಿ, ದೇವಸ್ಥಾನಕ್ಕೆ ಕಾಣಿಕೆ ಹಾಕಿದರೆ ಅದು ಸರಕಾರದ ಖಜಾನೆಗೆ ಸೇರುತ್ತದೆ ಆದ್ದರಿಂದ ದೇವಸ್ಥಾನಕ್ಕೆ ಹೂ ಮತ್ತು ಎಳೆನೀರು ಹಾಕಿದರೆ ಸಾಕು ಈ ರೀತಿಯಾಗಿ ಅಪಪ್ರಚಾರ ಮಾಡಿದ್ದಾರೆ. ಸಿದ್ದರಾಮಯ್ಯ ರವರ ಸರಕಾರವನ್ನು ಗುರಿಯಾಗಿಸಿಕೊಂಡು ಈ ಆಪಾದನೆಗಳನ್ನು ಮಾಡದ ಹಾಗೆ ನಮಗೆ ಕಾಣುತ್ತದೆ. ಯಾವ ಕಾಣದ ಕೈ ನಮಗೆ ಗೊತ್ತಿಲ್ಲ. ನಾವು ಮಾಧ್ಯಮದ ಮೂಲಕ ಸ್ಪಷ್ಟಿಕರಣ ನೀಡುವುದೇನೆಂದರೆ, ದೇವಸ್ಥಾನದಲ್ಲಿ ಸಂಗ್ರಹವಾದ ಯಾವುದೇ ಮೊತ್ತ ದೇವಸ್ಥಾನಕ್ಕೆ ಹೊರತು ಬೇರೆ ಯಾವುದಕ್ಕೂ ಹೋಗೋದಿಲ್ಲ. ಸಿದ್ದರಾಮಯ್ಯ ಅಥವಾ ಅವರ ಸರಕಾರ ಈ ಸೇವಾದರ ಪರಿಷ್ಕರಣೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಲಿಲ್ಲ. ಈ ರೀತಿಯಾಗಿ ಅಪವಾದ ಹಾಕುವುದು ಸರಿಯಲ್ಲ, ಇಂತಹ ಅಪವಾದದಿಂದಾಗಿ ಕಾನೂನಾತ್ಮಕ ತೊಡಕುಗಳು ಬಂದರೆ ಹೇಳಿಕೆ ಕೊಟ್ಟವರಿಗೆ ಇದಕ್ಕೆ ಹೊಣೆಗಾರರು, ನಾವಲ್ಲ ಎನ್ನುವುದಾಗಿ ಈ ಮೂಲಕ ಸ್ಪಷ್ಟಿಕರಣ ತಿಳಿಸುತ್ತೇವೆ.”





