25 October 2025 | Join group

ಪಹಲ್ಗಾಮ್ ಹತ್ಯಾಕಾಂಡದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಮೊಹಮದ್ ಕಟಾರಿಯಾ ಬಂಧನ

  • 25 Sep 2025 08:00:54 AM

ಜಮ್ಮು, ಕಾಶ್ಮೀರ: ಏಪ್ರಿಲ್ 22, 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿ ಉಗ್ರರು 26 ನಿರಪರಾಧಿ ನಾಗರಿಕರನ್ನು ಗುಂಡಿಕ್ಕಿ ಕೊಂದ ಕ್ರೂರ ಕೃತ್ಯವನ್ನು ದೇಶ ಮರೆಯಲು ಸಾಧ್ಯವಿಲ್ಲ. ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ, ಕುಟುಂಬಗಳ ಮುಂದೆ ಪತಿಗಳನ್ನು ಹತ್ಯೆ ಮಾಡಿದ ಘಟನೆ ರಾಷ್ಟ್ರವನ್ನೇ ನಡುಗಿಸಿತ್ತು.

 

ದೇಶವನ್ನು ಕದಮೆಟ್ಟಿಸಿದ ಆ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ “ಆಪರೇಷನ್ ಸಿಂದುರ” ಆರಂಭಿಸಿ ಪಾಕಿಸ್ತಾನದ ಭೂಮಿಯೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ನೆಲಸಮಗೊಳಿಸಿತು.

 

ಈ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸರು ದೊಡ್ಡ ಮುನ್ನಡೆ ಸಾಧಿಸಿ, ಉಗ್ರರಿಗೆ ಸುರಕ್ಷಿತ ಆಶ್ರಯ ಮತ್ತು ಲಾಜಿಸ್ಟಿಕ್ಸ್ ಒದಗಿಸಿದ್ದ ಆರೋಪದ ಮೇರೆಗೆ ಮೊಹಮದ್ ಯೂಸುಫ್ ಕಟಾರಿಯಾ ಎಂಬಾತನನ್ನು ಬಂಧಿಸಿದ್ದಾರೆ.

 

ಆಪರೇಷನ್ ಮಹಾದೇವ ವೇಳೆ ವಶಪಡಿಸಿಕೊಂಡಿದ್ದ ಬಂದೂಕುಗಳನ್ನು ಫರೆನ್ಸಿಕ್ ಪರೀಕ್ಷೆಗೆ ಒಳಪಡಿಸಿದಾಗ, ಚಂಡೀಗಢ ಲ್ಯಾಬ್‌ನಲ್ಲಿ ಪತ್ತೆಯಾದ ಗುಂಡಿನ ಚಿಪ್ಪುಗಳು ಪಹಲ್ಗಾಮ್ ಹತ್ಯೆಯ ಸ್ಥಳದಲ್ಲಿದ್ದವುಗಳಿಗೆ ಹೋಲಿಕೆ ಹೊಂದಿದ್ದವು ಎಂದು ದೃಢಪಟ್ಟಿದೆ. ಇದರಿಂದ ಕಟಾರಿಯಾ ವಿರುದ್ಧ ಸಾಕ್ಷ್ಯ ಬಲವತ್ತಾಗಿದೆ.

 

ಇದು ಆಪರೇಷನ್ ಮಹಾದೇವ ನಂತರದ ಪ್ರಥಮ ದೊಡ್ಡ ಯಶಸ್ಸು. ಸರ್ಕಾರವು ಪ್ರತಿಯೊಬ್ಬ ಸಹಚರನನ್ನೂ ಹಿಡಿದು ಶಿಕ್ಷಿಸುವುದಾಗಿ ಶಪಥ ಮಾಡಿದ್ದು, ಪ್ರಧಾನಮಂತ್ರಿ ಮೋದಿ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಘೋಷಿಸಿದಂತೆ – “ಆಪರೇಷನ್ ಸಿಂದುರ ಮುಗಿದಿಲ್ಲ, ಅದು ಮುಂದುವರಿಯುತ್ತದೆ” ಎಂದು ಪುನರುಚ್ಚರಿಸಿದ್ದಾರೆ.