ಛತ್ತೀಸ್‌ಗಢ: ಭಾರತದ ನ್ಯಾಯಾಂಗದ ಗತಿಯ ಕುರಿತು ಉತ್ತಮ ಉದಾಹರಣೆಯೊಂದು ದಾಖಲಾಗಿದೆ. ಛತ್ತೀಸ್‌ಗಢದ 83 ವರ್ಷದ ವ್ಯಕ್ತಿಯೊಬ್ಬರು ಸಣ್ಣ ಮಟ್ಟದ ಲಂಚದ ಪ್ರಕರಣದಲ್ಲಿ ಸಿಕ್ಕಿಬಿದ್ದು, ಸುಮಾರು ನಾಲ್ಕು ದಶಕಗಳ ಬಳಿಕ ನಿರ್ದೋಷಿಯಾಗಿ ಹೊರಬಂದಿದ್ದಾರೆ.
ಜಾಗೇಶ್ವರ್ ಪ್ರಸಾದ್ ಅವದಿಯಾ (83) ಅವರನ್ನು 1986ರಲ್ಲಿ ಕೇವಲ ₹100 ಲಂಚ ಪಡೆದ ಆರೋಪದಲ್ಲಿ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಅದಾಗಿನಿಂದಲೇ ಈ ಪ್ರಕರಣವು ನ್ಯಾಯಾಲಯದಲ್ಲಿ 39 ವರ್ಷಗಳ ಕಾಲ ಬಾಕಿ ಉಳಿಯಿತು.
ಈ ದೀರ್ಘಕಾಲದ ಕಾನೂನು ಹೋರಾಟದ ಅವಧಿಯಲ್ಲಿ ಅವರ ಬದುಕು ಸಂಪೂರ್ಣ ಬದಲಾಗಿ ಕಷ್ಟದ ದಿನಗಳನ್ನು ಕಳೆಯುವಂತಾಗಿದೆ.
1988ರಿಂದ 1994ರ ನಡುವೆ ಉದ್ಯೋಗ ಕಳೆದುಕೊಂಡರು, ಬಡ್ತಿ ನಿಂತುಹೋಯಿತು, ಪಿಂಚಣಿ ದೊರೆಯಲಿಲ್ಲ. ವೇತನ, ಹೆಚ್ಚುವರಿ ಸೌಲಭ್ಯಗಳನ್ನೂ ಕಳೆದುಕೊಂಡರು. "ಲಂಚಗಾರ" ಎಂಬ ಮುದ್ರೆ ಸಮಾಜದಲ್ಲಿ ಅವರ ಕುಟುಂಬಕ್ಕೂ ಅವಮಾನ ತಂದಿತು. ಶಾಲಾ ಶುಲ್ಕ ಕಟ್ಟಲಾಗದೆ ಅವರ ಮಕ್ಕಳು ಓದನ್ನು ನಿಲ್ಲಬೇಕಾಯಿತು. ಹೋರಾಟದ ನಡುವೆ ಅವರ ಪತ್ನಿಯೂ ಪ್ರಾಣ ಕಳೆದುಕೊಂಡರು.
ಜೀವನ ಸಾಗಿಸಲು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿದ್ದ ಅವದಿಯಾ, 39 ವರ್ಷಗಳ ಕಾಲ ಭ್ರಷ್ಟಾಚಾರದ ಆರೋಪದ ಟ್ಯಾಗ್‌ನೊಂದಿಗೆ ಬದುಕಬೇಕಾಯಿತು. ಕೊನೆಗೂ ಇಷ್ಟು ದೀರ್ಘಾವಧಿಯ ನಂತರ ನ್ಯಾಯಾಲಯವು ಅವರನ್ನು ನಿರ್ದೋಷಿ ಎಂದು ಘೋಷಿಸಿದೆ.
ಈ ಪ್ರಕರಣವು ಜನರ ಕೋಪಕ್ಕೆ ಕಾರಣವಾಗಿದೆ. "ಇದು ಯಾವ ತರಹದ ನ್ಯಾಯ? ಕೇವಲ ₹100 ಆರೋಪಕ್ಕಾಗಿ ಒಬ್ಬ ವ್ಯಕ್ತಿಯ ಬದುಕನ್ನೇ ಹಾಳುಮಾಡುವುದು ನ್ಯಾಯವೇ?" ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಘಟನೆ ಮತ್ತೊಮ್ಮೆ ನ್ಯಾಯಾಂಗದಲ್ಲಿ ಶೀಘ್ರಗತಿಯ ತೀರ್ಪು ಅಗತ್ಯವಿದೆ ಎಂಬ ವಿಚಾರಕ್ಕೆ ಬೆಳಕು ಚೆಲ್ಲಿದೆ. ತಡವಾದ ನ್ಯಾಯವು ಅನೇಕ ನಿರ್ದೋಷಿ ಜೀವಗಳನ್ನು ಹಾಳು ಮಾಡಬಹುದು ಎಂಬ ಚರ್ಚೆ ನಡೆಯುತ್ತಿದೆ.





