ಮಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತಷ್ಟು ತಾಂತ್ರಿಕ ಸಮಸ್ಯೆಗೆ ಸಿಲುಕಿದ್ದು ಶಿಕ್ಷಕರ ಪರದಾಟ ಮುಂದುವರಿದಿದೆ. ಆ್ಯಪ್‌ನಲ್ಲಿ ಎದುರಾದ ತಾಂತ್ರಿಕ ಸಮಸ್ಯೆಯಿಂದಾಗಿ ಶುಕ್ರವಾರ ಬಹುತೇಕ ಗಣತಿದಾರರು ಅಕ್ಷರಶಃ ಪರದಾಡುವಂತಾಯಿತು.
ಕೆಲವರು 10 ಮನೆಗೆ ಹೋಗಿ ದಾಖಲಾತಿ ಪಡೆದರೂ ಕೂಡ 1 ಮಾತ್ರ ದಾಖಲಾಗಿ ಆಗಿದೆ. ಇನ್ನೂ ಕೆಲವರದ್ದು 10 ಮನೆಗೆ ಹೋಗಿದ್ದರೂ ಒಂದೂ ಕೂಡ ದಾಖಲಾತಿ ಆಗದಿರುವ ಘಟನೆಯೂ ಇದೆ.
ಮನೆಯಲ್ಲಿ ಗಂಟೆಗಟ್ಟಲೆ ಇದ್ದು ಪೂರ್ಣ ಮಾಹಿತಿ ಪಡೆದು ಎಲ್ಲ ಅಪ್‌ಲೋಡ್ ಮಾಡುವಾಗ ತಾಂತ್ರಿಕ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಗಣತಿದಾರ ಶಿಕ್ಷಕರು ದಿನವಿಡೀ ಸಮಸ್ಯೆ ಎದುರಿಸುವಂತಾಯಿತು. ಇಷ್ಟಿರುವಾಗಲೇ, ಗಣತಿದಾರರು ರಾತ್ರಿ 8 ಗಂಟೆಯವರೆಗೆ "ಫೀಲ್ಡ್'ನಲ್ಲಿ ಇರಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸೂಚನೆ ನೀಡಿದ ಔಚಿತ್ಯದ ಬಗ್ಗೆ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ಆ್ಯಪ್ ವ್ಯವಸ್ಥೆಯೇ ಸರಿ ಇಲ್ಲ; ಹೀಗಿದ್ದರೂ ರಾತ್ರಿ 8 ಗಂಟೆಯವರೆಗೆ ಇದ್ದೂ ಏನು ಪ್ರಯೋಜನ? ಸರಕಾರ ತಾಂತ್ರಿಕ ಸಮಸ್ಯೆ ಮೊದಲು ಸರಿಮಾಡಲಿ. ಬಳಿಕ ಕಡ್ಡಾಯ ಸೂಚನೆ ನೀಡಲಿ ಎಂದು ಆಗ್ರಹಿಸಿದ್ದಾರೆ.





