ಪುತ್ತೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ನೂತನ ಖಜಾಂಜಿಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಡ್ವಾಯಿ ರಘುರಾಮ ಭಟ್(67ವ,) ಅವರು ಅವಿರೋಧವಾಗಿ ಆಯ್ಕೆಯಾಗಿ ಸೆ.28ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿ ದೆಹಲಿ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಆಯ್ಕೆಯಾಗಿದ್ದಾರೆ. ಮುಂಬೈಯಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಅವಿರೋಧ ಆಯ್ಕೆ ನಡೆದು ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.
ಕರ್ನಾಟಕ ರಣಜಿ ತಂಡದಲ್ಲಿ ಎಡಗೈ ಸ್ಪಿನ್ನರ್ ಆಗಿ ಆಡಿದ್ದ ರಘುರಾಮ ಭಟ್ ಅವರು ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅದಾದ ಬಳಿಕ ಕ್ರಿಕೆಟ್ ಕೋಚ್ ಆಗಿ, ಆಡಳಿತಗಾರನಾಗಿ ಗುರುತಿಸಿಕೊಂಡಿದ್ದ ಅವರು ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.





