ಮಂಗಳೂರು: ಧರ್ಮಸ್ಥಳದಲ್ಲಿ ಬೆಳಕಿಗೆ ಬಂದ ಶವ ಹೂತಿಟ್ಟ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣವನ್ನು ಆದಷ್ಟು ಬೇಗ ಮುಗಿಸಲು ಕರ್ನಾಟಕ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಎಸ್ಐಟಿ ತಂಡಕ್ಕೆ ಸೂಚನೆ ನೀಡಿದ್ದಾರೆ. ಆದರೆ ಸರ್ಕಾರ ತ್ವರಿತವಾಗಿ ಈ ಪ್ರಕರಣವನ್ನು ಮುಗಿಸಲು ಪ್ರಯತ್ನಿಸುವುದರ ಹಿಂದೆ ಪ್ರಬಲ ವ್ಯಕ್ತಿಗಳ ಅಥವಾ ತನ್ನದೇ ಸರಕಾರದ ವ್ಯಕ್ತಿಗಳ ಇಲ್ಲವೇ ವಿರೋಧ ಪಕ್ಷಗಳ ರಾಜಕೀಯ ಒತ್ತಡವೂ ಕಾರಣವಾಗಿದೆಯೇ ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.
ಸರ್ಕಾರದ ಒಳಮೂಲಗಳ ಪ್ರಕಾರ, ಪ್ರಕರಣದ ತನಿಖೆ ವಿಳಂಬವಾದರೆ ಜನರ ಅಸಮಾಧಾನ ಹೆಚ್ಚಾಗುವ ಜೊತೆಗೆ ವಿರೋಧ ಪಕ್ಷಗಳು ಇದನ್ನು ರಾಜಕೀಯ ಹೋರಾಟದ ವಿಷಯವನ್ನಾಗಿ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರ ನಿರ್ಣಯಕ್ಕೆ ಬರಲು ಒತ್ತಡಕ್ಕೆ ಒಳಗಾಗಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಸಾಮಾಜಿಕ ಭಾವನೆಗಳು, ಮಾಧ್ಯಮದ ಒತ್ತಡ, ಮತ್ತು ರಾಜಕೀಯ ಕುತಂತ್ರಗಳು— ಎಲ್ಲವೂ ಸೇರಿ ಈ ಪ್ರಕರಣವನ್ನು ಬೇಗನೆ ಪರಿಹರಿಸುವ ಅಗತ್ಯ ಸರ್ಕಾರಕ್ಕೆ ಎದುರಾಗಿದ್ದು, ನಿಜಾಂಶವನ್ನು ಬಹಿರಂಗಪಡಿಸಿ ಜನರ ವಿಶ್ವಾಸ ಕಾಪಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.





