ಉಪ್ಪಿನಂಗಡಿ: ಮಾದಕ ವಸ್ತು ಸೇವಿಸಿದ್ದಲ್ಲದೆ, ಅದನ್ನು ಮಾರಾಟಕ್ಕಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಉಪ್ಪಿನಂಗಡಿಯ ಮಠದ ಹಿರ್ತಡ್ಕ ನಿವಾಸಿ ರಝಾಕ್ (43) ಬಂಧಿತ ಆರೋಪಿ. ಸೆ.30ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಅವಿನಾಶ ಎಚ್. ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರೊಂದನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಅದರ ಚಾಲಕ ರಝಾಕ್ ಕಾರನ್ನು ಸ್ವಲ್ಪ ದೂರಕ್ಕೆ ಕೊಂಡೊಯ್ದು ನಿಲ್ಲಿಸಿ ಇಳಿದು ಓಡಿ ಹೋಗಲು ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು ರಝಾಕ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ಎಂಡಿಎಂಎ ಮಾದಕ ವಸ್ತು ಸೇವಿಸಿದ್ದಲ್ಲದೆ, ಅದನ್ನು ಸಾಗಿಸುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ. ಕಾರನ್ನು ಪರಿಶೀಲಿಸಿದಾಗ 12.35 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಈ ಸಂಬಂಧ ಆರೋಪಿಯ ಬಳಿಯಿಂದ ತಲಾ 10 ಸಾವಿರ ರೂ. ಮೌಲ್ಯದ ಎರಡು ಮೊಬೈಲ್, ಕೃತ್ಯಕ್ಕೆ ಬಳಸಿದ ಸುಮಾರು 3 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.





