24 October 2025 | Join group

ಬಂಟ್ವಾಳ : ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

  • 03 Oct 2025 02:41:44 PM

ಬಂಟ್ವಾಳ : ರಸ್ತೆ ದಾಟುವ ವೇಳೆ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಅಮ್ಮೂರು ಕ್ರಾಸ್‌ನಲ್ಲಿ ನಡೆದಿದೆ. ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಲೋಕೇಶ್‌ ಮೂಲ್ಯ (44) ಮೃತ ದುರ್ದೈವಿ.

 

ಲೋಕೇಶ್ ಅವರು ಕಲ್ಲಡ್ಕದ ನಾಯರ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ರಸ್ತೆ ದಾಟುವ ವೇಳೆ ಅತಿವೇಗದಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಕಳೆದುಕೊಂಡು ಬಳಿಕ ಪಲ್ಟಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲೋಕೇಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ವೇಳೆ ಮೃತಪಟ್ಟ ಬಗ್ಗೆ ಪೋಲಿಸ್ ಇಲಾಖೆ ಮಾಹಿತಿ ನೀಡಿದೆ.

 

ರಿಕ್ಷಾದಲ್ಲಿ ಚಾಲಕನ ಪತ್ನಿ ಮಕ್ಕಳು ಹಾಗೂ ಮಾವ ಪ್ರಯಾಣಿಸುತ್ತಿದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.