24 October 2025 | Join group

ಸರ್ಕಾರಿ ಕರ್ತವ್ಯ ನಿರ್ಲಕ್ಷಿಸಿದ ಶಿಕ್ಷಕ ಅಮಾನತ್ತು – ಜಿಲ್ಲಾಧಿಕಾರಿಗಳ ಕಠಿಣ ಕ್ರಮ

  • 04 Oct 2025 03:27:42 PM

ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರಾಗಿ ನೇಮಕಗೊಂಡು ಆದೇಶವನ್ನು ಪಡೆದಿದ್ದರೂ ಸಮೀಕ್ಷೆಗೆ ಗೈರು ಹಾಜರಾದ ಶಾಲಾ ಶಿಕ್ಷಕರೊಬ್ಬರನ್ನು ಅಮಾನತ್ತಿನಲ್ಲಿರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

 

ಬ್ರಹ್ಮಾವರ ಶೆಟ್ಟಿಬೆಟ್ಟಿನ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ವೆಂಕಟೇಶ್ ಪಿ.ಬಿ. ಅಮಾನತುಗೊಂಡ ಶಿಕ್ಷಕರಾಗಿದ್ದಾರೆ. ಅವರನ್ನು ಸಮೀಕ್ಷೆಗೆ ಗಣತಿದಾರರಾಗಿ ನೇಮಕಗೊಳಿಸಿ ಆದೇಶ ಮಾಡಲಾಗಿತ್ತು. ಆದರೆ ಅವರು ನೇಮಕಾತಿ ಆದೇಶ ಸ್ವೀಕರಿಸಿರಲಿಲ್ಲ. ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದರೂ ನೇಮಕಾತಿ ಆದೇಶ ಪ್ರತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು.

 

ಹೀಗಾಗಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು ಈವರೆಗೂ ನೋಟಿಸ್‌ಗೆ ಸಮಜಾಯಿಷಿ ನೀಡಿರಲಿಲ್ಲ. ಈ ಕಾರಣಗಳಿಂದ ಸಮೀಕ್ಷೆದಾರ ವೆಂಕಟೇಶ್ ಪಿ.ಬಿ. ಇವರನ್ನು ಅಮಾನತ್ತಿನಲ್ಲಿರಿಸಿ ಆದೇಶ ಮಾಡಲಾಗಿದೆ.