ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಂಘಟನೆಗಾಗಿ ದುಡಿದ ಕಾರ್ಯಕರ್ತರಿಗೆ ಕಾನೂನಾತ್ಮಕ ಹಾಗೂ ಸಾಮಾಜಿಕ ಬೆಂಬಲ ನೀಡುವ ಉದ್ದೇಶದಿಂದ ಮಹೇಶ್ ವಿಕ್ರಂ ಹೆಗ್ಡೆ, ವಸಂತ್ ಗಿಳಿಯಾರ್, ಪುನೀತ್ ಕೆರೇಹಳ್ಳಿ, ಹರ್ಷ ಮುತಾಲಿಕ್, ಕಿರಿಕ್ ಕೀರ್ತಿ, ಗಿರೀಶ್ ಭಾರದ್ವಾಜ್ ಮತ್ತಿತರರು ಸಭೆ ನಡೆಸಿದ್ದಾರೆ.
ಮಹೇಶ್ ವಿಕ್ರಂ ಹೆಗ್ಡೆ ಅವರು ಮೊದಲ ಸುತ್ತಿನ ಮಾತುಕತೆ ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದು ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:
"ಹೊಸ ಚಿಂತನೆಗೆ ಮೊದಲ ಹೆಜ್ಜೆ ಇಟ್ಟಿದ್ದೇವೆ...
ಇತ್ತೀಚೆಗೆ ಜೈಲಿಗೆ ಹೋಗಿ ಬಂದ ನಂತರ ಒಂದು ಮಾತು ಹೇಳಿದ್ದೆ, ಸಂಘಟನೆಗಾಗಿ ದುಡಿದ ಕಾರ್ಯಕರ್ತರು ಜೈಲಿನಲ್ಲಿ ಇದ್ದಾರೆ, ಅವರಿಗೆ ಕಾನೂನಿನ ನೆರವು ಮತ್ತು ಅವರ ಕುಟುಂಬಕ್ಕೆ ನೆರವಾಗುವ ಬಗ್ಗೆ.
ಇಂದು ಆ ವಿಚಾರವಾಗಿ ಚರ್ಚಿಸಲು, ನಾವೆಲ್ಲರೂ ಒಟ್ಟು ಸೇರಿದ್ದೇವೆ. ಗೆಳೆಯ ವಸಂತ್ ಗಿಳಿಯಾರ್, ಪುನೀತ್ ಕೆರೇಹಳ್ಳಿ, ಹರ್ಷ ಮುತಾಲಿಕ್, ಕಿರಿಕ್ ಕೀರ್ತಿ, ಗಿರೀಶ್ ಭಾರದ್ವಾಜ್....
ಕಾರಣಾಂತರಗಳಿಂದ ಚಕ್ರವರ್ತಿ ಸೂಲಿಬೆಲೆ, ಅಜಿತ್ ಮತ್ತು ಅರುಣ್ ಶ್ಯಾಮ್ ಅವರು ಇಂದಿನ ಸಭೆಯಲ್ಲಿ ಇರಲಿಲ್ಲ, ಮುಂದಿನ ವಾರ ಮತ್ತೊಮ್ಮೆ ಎಲ್ಲರೂ ಕೂತು ಈ ನಿರ್ಧಾರದ ಬಗ್ಗೆ ಅಂತಿಮ ರೂಪುರೇಶೆ ಮಾಡಿ ನಿಮಗೂ ತಿಳಿಸುತ್ತೇವೆ.
ಧರ್ಮಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ನಾವೆಲ್ಲರೂ ಜೊತೆಯಾಗೋಣ. ಜೈ ಶ್ರೀ ರಾಮ್."
ಈ ಪೋಸ್ಟ್ ಮೂಲಕ, ಸಂಘಟನೆಗಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರ ಕಾನೂನಾತ್ಮಕ ಹಾಗೂ ಸಾಮಾಜಿಕ ನೆರವಿನ ಕುರಿತು ಹೊಸ ರೂಪುರೇಷೆ ತಯಾರಿಸುವ ಯೋಜನೆ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.