ಬಂಟ್ವಾಳ: ತಾಲೂಕು ಪಂಚಾಯತ್ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ಸಮೀಕ್ಷೆ ಬಗ್ಗೆ ಸುಳ್ಳು ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿ ತಾ. ಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು ಎಂಬವರ ವಿರುದ್ಧ ತಾ. ಪಂ ಇಒ ಸಚಿನ್ ಕುಮಾರ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಂಟ್ವಾಳ ತಾ ಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅವರು ದೂರು ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ವಾಟ್ಸಾಪ್ ಗೆ ಬಂದಿರುವ ಒಂದು ಪತ್ರವನ್ನು ವೀಕ್ಷಿಸಿದಾಗ, “ತಾಲೂಕು ಪಂಚಾಯತ್ ಬಂಟ್ವಾಳ” ಎಂಬ ದಪ್ಪ ಅಕ್ಷರದಲ್ಲಿ ಮುದ್ರಿತವಾಗಿರುವ ಹಾಗೂ ಅಧಿಕಾರವಿಲ್ಲದ ಮಾಜಿ ಸದಸ್ಯ ಪ್ರಭಾಕರ್ ಪ್ರಭು ಅವರಿಂದ ಅಂಕಿತಗೊಂಡಿರುವ ಪತ್ರದಲ್ಲಿ, ಅಧಿಕಾರವಿಲ್ಲದಿದ್ದರೂ ಅಧಿಕೃತ ಲೆಟರ್ ಹೆಡ್ ಬಳಸಿ ಸುಳ್ಳು ಮಾಹಿತಿ ಒಳಗೊಂಡಂತೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಒತ್ತಡ ಹೇರಲಾಗುತ್ತಿದೆ ಎಂದು ತೋರಿಸುವ ಪ್ರಯತ್ನ ಮಾಡಿರುವುದು ಕಂಡು ಬಂದಿದೆ.
ಈ ಮೂಲಕ ಅವರು ಸಾರ್ವಜನಿಕರನ್ನು ದಾರಿ ತಪ್ಪಿಸುವ ಹಾಗೂ ಸರ್ಕಾರಿ ಇಲಾಖೆಗಳಿಗೆ ಗೊಂದಲ ಉಂಟುಮಾಡುವ ಉದ್ದೇಶದಿಂದ ಅನಧಿಕೃತವಾಗಿ ಸರ್ಕಾರಿ ಲೆಟರ್ ಹೆಡ್ ಬಳಸಿ, ತಾನೇ ಅಧಿಕಾರದಲ್ಲಿರುವಂತೆ ತೋರಿಸಿಕೊಂಡಿದ್ದು, ಕಾನೂನುಬಾಹಿರ ಕೃತ್ಯವೆಸಗಿರುತ್ತಾರೆ ಎಂದು ಸಚಿನ್ ಕುಮಾರ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 147/2025 0 319(2), 336(2) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.