ಬೆಂಗಳೂರು: ಆಡಳಿತ ರೂಢ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಸಂಪುಟ ಪುನರ್ ರಚನೆಯ ಕುರಿತು ತೀವ್ರವಾದ ಚರ್ಚೆಗಳು ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಔತಣಕೂಟವನ್ನು ಏರ್ಪಡಿಸಲು ನಿರ್ಧರಿಸಿದ್ದಾರೆ.
ಅಕ್ಟೋಬರ್ 13ರಂದು ಈ ಔತಣಕೂಟ ನೆರವೇರಲಿದ್ದು ಸಂಪುಟ ಪುನರ್ ರಚನೆಯ ಬಗ್ಗೆ ಚರ್ಚೆಗಳು ನಡೆಯಲಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಸರಕಾರ 2.5 ವರ್ಷ ಪೂರ್ಣಗೊಳಿಸಿದ್ದು ಸಂಪುಟ ಪುನರ್ ರಚನೆ ಮಾಡುವ ಬಗ್ಗೆ ಹೈಕಮಾಂಡ್ ಸುಳಿವು ಕೊಟ್ಟಿದೆ.
ಮೂಲಗಳ ಪ್ರಕಾರ, ಈ ಬಾರಿ 10 ರಿಂದ 12 ಸಚಿವರುಗಳಿಗೆ ಕೋಕ್ ನೀಡುವ ಬಗ್ಗೆ ಯೋಚಿಸಲಾಗಿದೆ ಎನ್ನಲಾಗಿದೆ. ಈ ಸ್ಥಾನಗಳನ್ನು ಹೊಸಬರಿಗೆ ನೀಡಲಾಗುವುದು. ಕರಾವಳಿ ಭಾಗದ ಶಾಸಕರೊಬ್ಬರು ಈ ಬಾರಿಯ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ವಾಲ್ಮೀಕಿ ಸಮಾಜ ಸಚಿವ ಸ್ಥಾನದಿಂದ ವಂಚಿತರಾಗಿರುವ ಬಗ್ಗೆ ಈ ಹಿಂದೆ ಸಿದ್ದರಾಮಯ್ಯ ತಿಳಿಸಿದ್ದರು. ಆದ್ದರಿಂದ ಹೊಸ ಸಂಪುಟದಲ್ಲಿ ವಾಲ್ಮೀಕಿ ಸಮಾಜದ ಶಾಸಕರು ಹೊಸ ಸಂಪುಟದಲ್ಲಿ ಸ್ಥಾನ ಗಿಟ್ಟಿಸುವ ಸಾಧ್ಯತೆ ಹೆಚ್ಚಿದೆ.





