16 December 2025 | Join group

ರಾಜ್ಯ ಸರ್ಕಾರದಿಂದ `ಕಂಬಳ’ ಕ್ರೀಡೆಗೆ ಅಧಿಕೃತ ಮಾನ್ಯತೆ : 'ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ರಚನೆ.!

  • 10 Oct 2025 10:04:25 AM

ಮಂಗಳೂರು : ರಾಜ್ಯ ಸರ್ಕಾರವು ಕಂಬಳ ಕ್ರೀಡೆಗೆ ಅಧಿಕೃತ ಮಾನ್ಯತೆ ನೀಡಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ.

 

ರಾಜ್ಯ ಕಂಬಳ ಅಸೋಸಿಯೇಷನ್ ಗೆ ಮೂರು ವರ್ಷದ ಅವಧಿ ಅಥವಾ ಮುಂದಿನ ಆದೇಶದವರೆಗೆ ಮಾನ್ಯತೆ ನೀಡಲಾಗಿದೆ. ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಅ.15ರಂದು ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕಂಬಳ ಅಸೋಸಿಯೇಷನ್ ಗೆ ಬೈಲಾದ ಕರಡು ಪ್ರತಿ ಅನುಮೋದನೆ ಸಿಗಲಿದೆ.

 

ಅಸೋಸಿಯೇಷನ್ ಪ್ರತಿವರ್ಷ ಜೂ.30 ರೊಳಗೆ ಕಾರ್ಯಚಟುವಟಿಕೆಗಳ ಆಡಳಿತ ವರದಿ, ವಾರ್ಷಿಕ ವಹಿವಾಟುವಿನ ಆಡಿಟ್ ವರದಿ, ವಾರ್ಷಿಕ ಸಾಮಾನ್ಯ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳ ನಡವಳಿ ಪ್ರತಿ, ಕ್ಯಾಲೆಂಡರ್ ಆಫ್ ಇವೆಂಟ್, ಸಂಘಗಳ ನೋಂದಣಿ ಕಾಯಿದೆ 1960ರಡಿ ಸಕ್ಷಮ ಪ್ರಾಧಿಕಾರದಿಂದ ರಾಜ್ಯ ಕಂಬಳ ಅಸೋಸಿಯೇಷನ್ ನವೀಕರಿಸಿರುವ ಪ್ರತಿ ಒದಗಿಸಲು ಆದೇಶದಲ್ಲಿ ತಿಳಿಸಲಾಗಿದೆ. ಸಂಸ್ಥೆಯ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.