ನವದೆಹಲಿ: ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು 'ಗಾಜಾ ಶಾಂತಿ ಒಪ್ಪಂದ' ಕ್ಕೆ ಸಂಬಂಧಪಟ್ಟ ಮಹತ್ವದ ಸಚಿವ ಸಂಪುಟ ಸಭೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ ಘಟನೆ ಅಂತಾರಾಷ್ಟ್ರೀಯ ವಲಯದಲ್ಲಿ ಗಮನ ಸೆಳೆದಿದೆ. ಇಸ್ರೇಲ್ ಸರ್ಕಾರದ ಕಚೇರಿಯ ಪ್ರಕಾರ, ಈ ಸಂಭಾಷಣೆ ಗಾಜಾ ಶಾಂತಿ ಯೋಜನೆಯಡಿ ಒತ್ತೆಯಾಳುಗಳ ಬಿಡುಗಡೆ ಕುರಿತ ಒಪ್ಪಂದದ ಪ್ರಗತಿಗೆ ಸಂಬಂಧಪಟ್ಟಂತೆ ನಡೆಯಿತು.
ಭಾರತೀಯ ವಿಶ್ಲೇಷಕರ ಪ್ರಕಾರ, ಈ ಘಟನೆಯ ಪ್ರಾಮುಖ್ಯತೆ ಕೇವಲ ರಾಜಕೀಯ ಶಿಷ್ಟಾಚಾರಕ್ಕೆ ಸೀಮಿತವಾಗಿಲ್ಲ. ಇದು ಭಾರತದ ನಿಲುವುಗಳು ಹಾಗೂ ದೃಷ್ಟಿಕೋಣಗಳು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಗೌರವ ಮತ್ತು ವಿಶ್ವಾಸವನ್ನು ಸೂಚಿಸುತ್ತದೆ. ಶಾಂತಿ, ಭದ್ರತೆ ಮತ್ತು ಮಾನವೀಯ ಪ್ರಶ್ನೆಗಳ ಕುರಿತಂತೆ ಭಾರತ ಈಗ ಹೆಚ್ಚು ಕೇಳಲ್ಪಡುವ ಧ್ವನಿಯಾಗಿ ಹೊರಹೊಮ್ಮುತ್ತಿದೆ.
ಇದು ಭಾರತ–ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳ ಪ್ರತಿಬಿಂಬ ಮಾತ್ರವಲ್ಲ; ಭಾರತದ ರಾಜತಾಂತ್ರಿಕ ಚಾತುರ್ಯ ಮತ್ತು ವಿಶ್ವ ವೇದಿಕೆಯಲ್ಲಿ ಅದರ ಬೆಳೆಯುತ್ತಿರುವ ಪಾತ್ರದ ಗುರುತು ಕೂಡ ಆಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ವಿವಿಧ ಪ್ರಾದೇಶಿಕ ಬ್ಲಾಕ್‌ಗಳ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಾ, ಮಾತುಕತೆಯ ಮೂಲಕ ಶಾಂತಿಯ ಮಾರ್ಗ ಹುಡುಕುವ ದೇಶವಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ ಎಂದು ಬಲ್ಲವರು ಅಭಿಪ್ರಾಯಪಟ್ಟಿದ್ದಾರೆ.
ಮೋದಿಯವರು ಮತ್ತು ನೆತನ್ಯಾಹು ನಡುವಿನ ಈ ಸಂಭಾಷಣೆ ವ್ಯಕ್ತಿಪರ ಸ್ನೇಹದ ಪ್ರತೀಕವಾಗಿದ್ದರೂ, ಅದರ ಹಿಂದಿನ ಅರ್ಥ ಭಾರತದ ವಿಶ್ವಾಸಾರ್ಹ ಹಾಗೂ ಜವಾಬ್ದಾರಿಯುತ ರಾಜತಾಂತ್ರಿಕ ಧೋರಣೆಯತ್ತ ಸೂಚಿಸುತ್ತದೆ. ಇಂತಹ ಸಂದರ್ಭಗಳು ಭಾರತವು ಕೇವಲ ಪ್ರಾದೇಶಿಕ ಶಕ್ತಿಯಾಗಿ ಮಾತ್ರವಲ್ಲದೆ ಜಾಗತಿಕ ನೀತಿ ರೂಪಣೆಯಲ್ಲಿ ಸಹ ಪ್ರಮುಖ ಪಾತ್ರವಹಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ ಎನ್ನಲಾಗಿದೆ.





