23 October 2025 | Join group

ಬೆಂಗಳೂರು ನಡಿಗೆ ವೇಳೆ ಹೈಡ್ರಾಮಾ ಡಿಕೆಶಿ- ಮುನಿರತ್ನ ನಡುವೆ ಬಿಗ್ ಫೈಟ್

  • 12 Oct 2025 12:19:15 PM

ಬೆಂಗಳೂರು: ನಗರದ ಜೆ.ಪಿ ಪಾರ್ಕ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ ನಡೆದಿದೆ.

 

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ವೇದಿಕೆ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

 

ಡಿಸಿಎಂ ಡಿಕೆಶಿ ಮಾತನಾಡುತ್ತಾ ಆರೆಸ್ಸೆಸ್ ಗಣವೇಷದಲ್ಲಿ ವೇದಿಕೆ ಕೆಳಗಡೆ ಕುಳಿತಿದ್ದ ಮುನಿರತ್ನ ಅವರನ್ನು ‘ಏಯ್ ಕರಿಟೋಪಿ ಶಾಸಕ ಬಾರಪ್ಪ’ ಎಂದು ವೇದಿಕೆಗೆ ಕರೆದಿದ್ದಾರೆ.

 

ಮುನಿರತ್ನ ವೇದಿಕೆಗೆ ಹೋಗಿ ಡಿಕೆಶಿ ಬಳಿ ಮೈಕ್ ಕೇಳಿದರು. ಆದರೆ ಡಿಕೆಶಿ ಮೈಕ್ ನೀಡದೇ ಇಲ್ಲಿ ಕುಳಿತುಕೊಳ್ಳಿ ಎಂದರು. ಇದಕ್ಕೆ ಒಪ್ಪದ ಮುನಿರತ್ನ ಮೈಕ್ ನೀಡುವಂತೆ ಕೇಳಿದರು. ಕೊನೆಗೆ ಮುನಿರತ್ನ ಅವರು ಮೈಕ್ ಪಡೆದು, ಆರ್‌ಎಸ್‌ಎಸ್ ಪಥಸಂಚಲನ ಮುಗಿಸಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ. ಸರ್ಕಾರದ ನಡಿಗೆ ಕಾರ್ಯಕ್ರಮಕ್ಕೆ ಈ ಭಾಗದ ಸಂಸದರನ್ನು ಆಹ್ವಾನಿಸಿಲ್ಲ, ಶಾಸಕನಾಗಿರುವ ನನ್ನನ್ನೂ ಆಹ್ವಾನಿಸಿಲ್ಲ. ಸೋತ ಅಭ್ಯರ್ಥಿಯ ಜತೆ ನಡಿಗೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ರಾಜಕೀಯಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮ ಹೊರತು ಜನರಿಗಾಗಿ, ಜನರ ಸಮಸ್ಯೆ, ಕುಂದುಕೊರತೆ ಆಲಿಸಲು ಮಾಡುತ್ತಿರುವ ಕಾರ್ಯಕ್ರಮವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಸಚಿವರು ನನ್ನ ಮೇಲೆಯೇ ಕೈ ಎತ್ತಿ ಹಲ್ಲೆಗೆ ಯತ್ನಿಸಿದ್ದಾರೆ. ನನ್ನ ಮೇಲೆ ರೌಡಿಸಂ ಮಾಡುತ್ತಿದ್ದಾರೆ. ಶಾಸಕನಾಗಿರುವ ನನ್ನನ್ನೇ ಅವಮಾನಿಸಿದ್ದಾರೆ. ನನ್ನನ್ನು ಹೊಡೆಯಲು ಕನಕಪುರ, ಚನ್ನಪಟ್ಟಣದಿಂದ ಜನರನ್ನು ಕರೆಸಿದ್ದಾರೆ. ಇದು ಸಾರ್ವಜನಿಕ ಕಾರ್ಯಕ್ರಮವಲ್ಲ ಕಾಂಗ್ರೆಸ್ ಕಾರ್ಯಕ್ರಮ ಎಂದು ಆರೋಪಿಸಿದ್ದಾರೆ.