ಪುತ್ತೂರು: ಅ.10 ರಂದು ಸಂಜೆ ಸೇಡಿಯಾಪು ಬಳಿಯ ಕೂಟೇಲು ಪ್ರದೇಶದಲ್ಲಿ ಹೆಜ್ಜೇನು ದಾಳಿಯಿಂದ ಮೂವರು ಗಾಯಗೊಂಡಿದ್ದು, ಇವರಲ್ಲಿ 7 ವರ್ಷದ ಬಾಲಕಿ ಇಶಾ ಸಾವನ್ನಪ್ಪಿದ್ದಾಳೆ.
ಕೂಟೇಲು ನಿವಾಸಿಗಳಾದ ಕಿರಣ್–ಚೈತ್ರಾ ದಂಪತಿಯ ಏಕೈಕ ಪುತ್ರಿ, ವಿವೇಕಾನಂದ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಇಶಾ ಹಾಗೂ ಅದೇ ಶಾಲೆಯ 5ನೇ ತರಗತಿಯ ಪ್ರತ್ಯೂಶ್ ಮೇಲೆ ಅಕಸ್ಮಾತ್ ಹೆಜ್ಜೇನುಗಳು ದಾಳಿ ನಡೆಸಿದ್ದವು. ಮಕ್ಕಳ ಕಿರುಚಾಟ ಕೇಳಿ ರಕ್ಷಣೆಗೆ ಬಂದ ನಾರಾಯಣ್ ಎಂಬ ಸ್ಥಳೀಯರ ಮೇಲೂ ದಾಳಿ ನಡೆದಿತ್ತು.
ಗಂಭೀರ ಗಾಯಗೊಂಡ ಇಶಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಅ.11ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಪ್ರಾಣ ಕಳೆದುಕೊಂಡರು.
ಇದೇ ವೇಳೆ, ಮೃತದೇಹವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ನ್ನು ಪೆರ್ನೆ–ಕಡಂಬು ರಸ್ತೆಯಲ್ಲಿ ಮದ್ಯಪಾನ ಮಾಡಿದ ಯುವಕರ ಗುಂಪೊಂದು ತಡೆದು ಅಸಭ್ಯ ವರ್ತನೆ ತೋರಿದೆ ಎಂದು ತಿಳಿದುಬಂದಿದೆ. ಆಂಬ್ಯುಲೆನ್ಸ್ ಚಾಲಕ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಕಾರಿನ ನಂಬರ್ ಆಧರಿಸಿ ಪೊಲೀಸರು ಆರೋಪಿಗಳನ್ನು ಗುರುತಿಸಿ ತನಿಖೆ ಮುಂದುವರೆಸಿದ್ದಾರೆ.