ಮಧುಗಿರಿ : ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ವಿಚಿತ್ರ ಬೇಡಿಕೆಯಿಟ್ಟಿದ್ದು, ಮಗನಿಗೆ ವಧು ಹುಡುಕಿಕೊಡಿ ಎಂದು ಮಹಿಳೆ ಬೇಡಿರುವ ಅಪರೂಪದ ಘಟನೆ ನಡೆದಿದೆ.
ಹೌದು. ಸರ್ಕಾರ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜಿಸಿದ್ದು, ಪೊಲೀಸರು ಮನೆಗೆ ಬಂದು ಸಾರ್ವಜನಿಕರ ಸಮಸ್ಯೆ ಆಲಿಸುತ್ತಾರೆ. ಈ ವೇಳೆ ಮಹಿಳೆಯೊಬ್ಬರು ನನ್ನ ಮಗನಿಗೆ ಹುಡುಗಿ ಸಿಗುತ್ತಿಲ್ಲ, ದಯವಿಟ್ಟು ಹುಡುಗಿ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನನಗೆ ಏನೂ ಸಮಸ್ಯೆ ಇಲ್ಲ, ಆದರೆ ನನ್ನ ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದೇವೆ. ಎಲ್ಲೂ ಹೆಣ್ಣು ಸಿಕ್ಕಿಲ್ಲ. ದಯವಿಟ್ಟು ಹೆಣ್ಣು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬಡಾವಣೆಯಲ್ಲಿ ನೆಲೆಸಿದ್ದ ಕುಟುಂಬ ಈ ಮನವಿ ಮಾಡಿದೆ. ಪೊಲೀಸ್ ಕಾನ್ಸ್ ಟೇಬಲ್ ಗಳು ದೊಡ್ಡೇರಿ ಗ್ರಾಮದ ಮುದ್ದಮ್ಮ ಎಂಬುವವರ ಮನೆಗೆ ಭೇಟಿ ನೀಡಿದ್ದರು. ನಾವು ಕೃಷಿ ಕೆಲಸ ಮಾಡುತ್ತಿರುವುದರಿಂದ ಯಾರೂ ಕೂಡ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಮಗನಿಗೆ ಹೆಣ್ಣು ಹುಡುಕಿಕೊಡಿ ಎಂದು ಮನವಿ ಮಾಡಿದರು. ಒಂದು ಹಂತಕ್ಕೆ ಗೊಂದಲಕ್ಕೀಡಾದ ಪೊಲೀಸರು ನಂತರ ಮಹಿಳೆಯ ಮನವಿ ಸ್ವೀಕರಿಸಿದ್ದಾರೆ.