23 October 2025 | Join group

ಚಿತ್ತಾಪುರದಲ್ಲಿ RSS ಭಗವಾ ಧ್ವಜ, ಬ್ಯಾನರ್ ತೆರವು: ಹಿಂದೂ ಸಂಘಟನೆಗಳ ಆಕ್ರೋಶ

  • 18 Oct 2025 10:26:02 AM

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ನಾಳೆ ಭಾನುವಾರ ಆರ್.ಎಸ್.ಎಸ್ ಪಥಸಂಚಲನ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಅಳವಡಿಸಲಾಗಿದ್ದ ಆರ್.ಎಸ್.ಎಸ್ ಬ್ಯಾನರ್ ಹಾಗೂ ಭಗವಾ ಧ್ವಜಗಳನ್ನು ತೆರವು ಮಾಡಲಾಗಿದೆ.

 

ಸರ್ಕಾರಿ ಜಾಗಗಳು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘ-ಸಂಸ್ಥೆಗಳ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನ ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ರಸ್ತೆಯುದ್ದಕ್ಕೂ ಭಗವಾ ಧ್ವಜ ಅಳವಡಿಸಲಾಗಿತ್ತು, ಬ್ಯಾನರ್ ಗಳನ್ನು ಹಾಕಲಾಗಿತ್ತು.

 

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ತಡರಾತ್ರಿ ಪುರಸಭೆ ಅಧಿಕಾರಿಗಳು ಭಗವಾ ಧ್ವಜಗಳನ್ನು ಹಾಗೂ ಆರ್.ಎಸ್.ಎಸ್ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ. ಆಳಂದದಲ್ಲಿಯೂ ಆರ್.ಎಸ್.ಎಸ್ ಬಾವುಟಗಳನ್ನು ತೆರವು ಮಾಡಲಾಗಿದ್ದು, ಸರ್ಕಾರದ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

 

ಮೂಲಗಳ ಪ್ರಕಾರ, ಸಂಘಟನೆಯು ಅಧಿಕೃತ ಅನುಮತಿ ಪಡೆದಿದ್ದು, ನಗರ ಪುರಸಭೆಗೆ ₹6,000 ಪಾವತಿಯ ಕೂಡ ಮಾಡಿದರೂ ಈ ರೀತಿಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.