ಬೆಂಗಳೂರು: ನಗರದಿಂದ ಹೃದಯ ಭಾಗದಿಂದ ಸುಮಾರು 36 ಕಿ.ಮೀ ದೂರದಲ್ಲಿರುವ ಆನೇಕಲ್ ಬಳಿ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಪುಟದಲ್ಲಿ ಅನುಮೋದನೆ ಮಾಡಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಹಳೆಯದಾಗಿರುವುದರಿಂದ ಹಾಗೂ 35,000 ಆಸನಗಳ ಸಾಮರ್ಥ್ಯವಷ್ಟೇ ಇರುವುದರಿಂದ ಆನೇಕಲ್ ಬಳಿ ಬೃಹತ್ ಸ್ಟೇಡಿಯಂ ನಿರ್ಮಾಣಕ್ಕೆ ಸರಕಾರ ಯೋಜನೆ ನಡೆಸಿದೆ.
ಆನೇಕಲ್ ತಾಲೂಕಿನ ಇಂಡ್ಲವಾಡಿ ಬಳಿ 75 ಎಕರೆಯಲ್ಲಿ 2,350 ಕೋಟಿ ರೂ. ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣವಾಗಲಿದೆ. 80,000 ಆಸನಗಳ ಸಾಮರ್ಥ್ಯವಿರುವ ಸ್ಟೇಡಿಯಂ ರಾಜ್ಯದ ಅತೀ ದೊಡ್ಡ ಸ್ಟೇಡಿಯಂ ಆಗಿ ಹೊರಹೊಮ್ಮಲಿದೆ.
ಸಂಗೀತ ಕಚೇರಿಗಳು, ಸಾರ್ವಜನಿಕ ಕೂಟಗಳು ಕೂಡ ಆಯೋಜಿಸಲು ಅನುಕೂಲವಾಗುವಂತೆ ಸ್ಟೇಡಿಯಂ ನಿರ್ಮಿಸಲು ಸರಕಾರ ತೀರ್ಮಾನಿಸಿದೆ.
"ಈ ಆಧುನಿಕ ಸ್ಥಳವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದರ ಜೊತೆಗೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೇಂದ್ರವಾಗಲಿದೆ. ಬೆಂಗಳೂರಿನ ಶಕ್ತಿ ಮತ್ತು ಹೆಮ್ಮೆಯನ್ನು ಪ್ರತಿಬಿಂಬಿಸುವ ಸ್ಥಳಗಳನ್ನು ಸೃಷ್ಟಿಸುವುದು ನಮ್ಮ ದೃಷ್ಟಿ" ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.