ಬೆಂಗಳೂರು: ಬೆಂಗಳೂರಿನ ಮಡಿವಾಳ ಬಳಿಯ ಲಾಡ್ಜ್ ವೊಂದರಲ್ಲಿ ಪುತ್ತೂರು ಮೂಲದ ಯುವಕ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ.
ಮರಣೋತ್ತರ ಪರೀಕ್ಷಾ ವರದಿಯಲ್ಲಿ ಯುವಕನ ಕಿಡ್ನಿ ಫೇಲ್ಯೂರ್ ಆಗಿತ್ತು ಎಂಬುದು ದೃಢಪಟ್ಟಿದೆ. ಆತನಿಗೆ ಲಿವರ್ ಸಮಸ್ಯೆ ಕೂಡ ಇತ್ತು ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಕೆಲ ದಿನಗಳ ಹಿಂದೆ ಪುತ್ತೂರು ಮೂಲದ ಯುವಕ ಹಾಗೂ ಓರ್ವ ಯುವತಿ ಮಡಿವಾಳ ಬಳಿಯ ಲಾಡ್ಜ್ ನಲ್ಲಿ ತಂಗಿದ್ದರು. 8 ದಿನಗಳ ಕಾಲ ಮಡಿವಾಳ ಬಳಿ ಲಾಡ್ಜ್ ನಲ್ಲಿ ವಾಸವಾಗಿದ್ದರು. ಈ ವೇಳೆ ಯುವಕ ಏಕಾಏಕಿ ಸಾವನ್ನಪ್ಪಿದ್ದ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಯುವಕ ಪುತ್ತೂರು ಮೂಲದ ತಕ್ಷಿತ್ ಎಂದು ತಿಳಿದುಬಂದಿತ್ತು. ಯುವಕನ ಸಾವಿಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತನ ಕಿಡ್ನಿ ವೈಫಲ್ಯವಾಗಿತ್ತು. ಅಲ್ಲದೇ ಯುವಕ ಲಿವರ್ ಸಮಸ್ಯೆ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಆರೋಗ್ಯ ಸಮಸ್ಯೆಯಿಂದಲೇ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಯುವಕನ ಜೊತೆಯಲ್ಲಿದ್ದ ಯುವತಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.