ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಶುಕ್ರವಾರ ಬೆಳಗಿನ ಜಾವ 42 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಚಿನ್ನೇಕೂರ್ ಗ್ರಾಮವನ್ನು ದಾಟುತ್ತಿದ್ದ ಬಸ್ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ.
ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಬೆಂಕಿಯನ್ನು ನಂದಿಸಲಾಗಿದೆ. ನಂತರ ಸಾವುನೋವುಗಳ ನಿಖರವಾದ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ಇಲ್ಲಿಯವರೆಗೆ, ಬಸ್‌ನಿಂದ 15 ಜನರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಟ್ಟ ಬಸ್‌ನ ಅವಶೇಷಗಳಿಂದ 25 ಶವಗಳನ್ನು ಹೊರತೆಗೆಯಲಾಗಿದೆ.
ಬಸ್ ಕಾಲೇಶ್ವರಂ ಟ್ರಾವೆಲ್ಸ್ ಎಂಬ ಸಂಸ್ಥೆಗೆ ಸೇರಿದೆ. ಬೆಂಕಿಯ ಘಟನೆಯ ಸಮಯದಲ್ಲಿ ಚಾಲಕ ಮತ್ತು ಸಹಾಯಕ ಸೇರಿದಂತೆ ಒಟ್ಟು 42 ಜನ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಬೆಂಕಿ ಅವಘಡಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅಪಘಾತದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರು, ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಭರವಸೆ ನೀಡಿದ್ದಾರೆ





