ನವದೆಹಲಿ: ಜಾಹೀರಾತು ಕ್ಷೇತ್ರದಲ್ಲಿ ಸೃಜನಾತ್ಮಕತೆ ಮತ್ತು ಭಾವನಾತ್ಮಕ ಸ್ಪರ್ಶದ ಮೂಲಕ ಜನಮನ ಗೆದ್ದ ಖ್ಯಾತ ಜಾಹೀರಾತು ದಂತಕಥೆ ಪಿಯೂಷ್ ಪಾಂಡೆ (70) ಶುಕ್ರವಾರ ನಿಧನರಾದರು. ಅವರು ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.
ಪಿಯೂಷ್ ಪಾಂಡೆ ಅವರು ಸುಮಾರು ನಾಲ್ಕು ದಶಕಗಳ ಕಾಲ ಜಾಹೀರಾತು ಲೋಕದಲ್ಲಿ ಪ್ರಭಾವ ಬೀರಿ, ಭಾರತೀಯ ಬ್ರ್ಯಾಂಡ್‌ಗಳ ದಿಕ್ಕನ್ನು ಬದಲಿಸಿದವರು. ಅವರು ಓಗಿಲ್ವಿ ಇಂಡಿಯಾ ಸಂಸ್ಥೆಯ ವಿಶ್ವಾದ್ಯಂತ ಮುಖ್ಯ ಸೃಜನಾತ್ಮಕ ಅಧಿಕಾರಿ ಹಾಗೂ ಭಾರತದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು.
1982ರಲ್ಲಿ ಓಗಿಲ್ವಿ ಸಂಸ್ಥೆಗೆ ಸೇರ್ಪಡೆಗೊಂಡ ಪಾಂಡೆ ಅವರು ಮೊದಲ ಜಾಹೀರಾತನ್ನು ಸನ್‌ಲೈಟ್ ಡಿಟರ್ಜೆಂಟ್‌ಗಾಗಿ ಬರೆದಿದ್ದರು. ಬಳಿಕ ಅವರು ಸೃಜನಾತ್ಮಕ ವಿಭಾಗದ ಪ್ರಮುಖ ಶಕ್ತಿಯಾಗಿ ಫೆವಿಕಾಲ್, ಕ್ಯಾಡ್ಬರಿ, ಏಷ್ಯನ್ ಪೇಂಟ್ಸ್, ಲೂನಾ ಮೊಪೆಡ್, ಫಾರ್ಚೂನ್ ಆಯಿಲ್ ಸೇರಿದಂತೆ ಅನೇಕ ಬ್ರಾಂಡ್‌ಗಳಿಗೆ ಐಕಾನಿಕ್ ಜಾಹೀರಾತುಗಳನ್ನು ಸೃಷ್ಟಿಸಿದರು.





