28 October 2025 | Join group

ಧರ್ಮಸ್ಥಳದಲ್ಲಿ ನಾಪತ್ತೆ: 13 ವರ್ಷಗಳ ನಂತರ ಪ್ರಕರಣ ದಾಖಲಿಸಿಕೊಂಡ ಪುಂಜಾಲಕಟ್ಟೆ ಪೊಲೀಸರು - ಅಂದು ರಿಜೆಕ್ಟ್ ಇಂದು ದೂರು ಸ್ವೀಕಾರ

  • 27 Oct 2025 08:59:33 PM

ಮಂಗಳೂರು: 2012ರಲ್ಲಿ ಧರ್ಮಸ್ಥಳಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಕವಲಾಮುದುರು ನಿವಾಸಿ ನಾರಾಯಣ ದೇವಾಡಿಗ ಅವರ ಪುತ್ರಿ ಹೇಮಾವತಿ ಅಲಿಯಾಸ್ ಹೇಮಲತಾ (17) ನಾಪತ್ತೆ ಪ್ರಕರಣವು 13 ವರ್ಷಗಳ ಬಳಿಕ ಮತ್ತೆ ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ನೀಡಿದ ದೂರನ್ನು ಈಗ ಪುಂಜಾಲಕಟ್ಟೆ ಪೊಲೀಸರು ಸ್ವೀಕರಿಸಿದ್ದು, ಈ ಕುರಿತು ಬೆಂಗಳೂರು ಪೋಸ್ಟ್ ವರದಿ ಮಾಡಿದೆ.

 

ಮೂಲಗಳ ಪ್ರಕಾರ, ಹೇಮಲತಾ ಆ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ವಸಂತಿ ಎಂಬಾಕೆಯ ಪರಿಚಯದಲ್ಲಿ ಇದ್ದಳು. ಕೆಲಸದ ರೀತಿಯನ್ನು ತಿಳಿಯಲು ಪೋಷಕರ ಮನವಿಯ ಮೇರೆಗೆ ಹೇಮಲತಾ ಅಂಗನವಾಡಿ ಕೇಂದ್ರಕ್ಕೆ ತೆರಳಿ ವಸಂತಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿದ್ದಳು. ಇಬ್ಬರು ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿ ತೆರಳಿದ್ದು, ನಂತರ ಹೇಮಲತಾ ನಾಪತ್ತೆಯಾಗಿದ್ದಾಳೆ.

 

ನಾಪತ್ತೆಯಾದ ಬಳಿಕ ಹೇಮಲತಾಳ ಸಹೋದರ ನಿತಿನ್ ದೇವಾಡಿಗ ಮತ್ತು ಕುಟುಂಬಸ್ಥರು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲು ಯತ್ನಿಸಿದರೂ, ಪೊಲೀಸರು “ನಾವು ಹುಡುಕುತ್ತೇವೆ, ನೀವು ಮನೆಗೆ ಹೋಗಿ” ಎಂದು ಹೇಳಿ ದೂರನ್ನು ಸ್ವೀಕರಿಸಿರಲಿಲ್ಲ ಎಂಬ ಆರೋಪ ಕುಟುಂಬದವರದು.

 

ಇದಲ್ಲದೆ, ವಸಂತಿಯು ಕೂಡ ಕುಟುಂಬಕ್ಕೆ ತಪ್ಪು ಮಾಹಿತಿ ನೀಡಿ “ನಾನು ಧರ್ಮಸ್ಥಳಕ್ಕೆ ಹೋಗಿಲ್ಲ” ಎಂದು ಹೇಳಿದ್ದಾಳೆ ಎಂಬುದು ಹೇಮಲತಾಳ ಸಹೋದರ ನವೀನ್ ದೇವಾಡಿಗ ನೀಡಿದ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಆಶ್ಚರ್ಯವೆಂದರೆ, ವಸಂತಿ ಮತ್ತು ಹೇಮಲತಾ ಧರ್ಮಸ್ಥಳಕ್ಕೆ ಹಿಂದೆಯೂ ತೆರಳಿದ್ದು, ಈ ಪ್ರಯಾಣವು ಅವರ ಎರಡನೇ ಭೇಟಿ ಆಗಿತ್ತು.

 

ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರ ಧರ್ಮಸ್ಥಳ ಮತ್ತು ಅದರ ಸುತ್ತಮುತ್ತ ನಡೆದಿರುವ ನಿಗೂಢ ನಾಪತ್ತೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಈ ಹಿನ್ನೆಲೆಯಲ್ಲಿ ಎಸ್ಐಟಿ ಸಲಹೆಯ ಮೇರೆಗೆ ಹೇಮಲತಾ ಕುಟುಂಬ ಇದೀಗ ಅಧಿಕೃತ ದೂರು ದಾಖಲಿಸಿದೆ.

 

ಬಡತನದಲ್ಲಿ ಬದುಕುತ್ತಿರುವ ಈ ಕುಟುಂಬ ಹಿಂದಿನ ದಿನಗಳಲ್ಲಿ ದೂರು ನೀಡದೆ ಇದ್ದದ್ದು ಆರ್ಥಿಕ ತೊಂದರೆಗಳ ಕಾರಣವಾಗಿದ್ದರೆ, ಈಗ ಎಸ್ಐಟಿ ನಿರ್ದೇಶನದಂತೆ ಪ್ರಕರಣದ ಪ್ರತಿಯನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಸಲ್ಲಿಸಿ ಅದರ ದೃಢೀಕರಣವನ್ನು ಪಡೆದುಕೊಂಡಿದ್ದಾರೆ.

 

ಮಾದ್ಯಮದಲ್ಲಿ ವರದಿಯಾದ ಪ್ರಕಾರ, ಪೊಲೀಸರು ವಸಂತಿಯ ಮನೆಯನ್ನು ಭೇಟಿಯಾದಾಗ ಆಕೆ “ನನ್ನ ಮನೆಗೆ ಪೊಲೀಸರು ಬಂದರೆ ನಾನು ಜೀವತ್ಯಾಗ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾಳೆ ಎಂಬ ಮಾಹಿತಿ ದೊರೆತಿದೆ.

 

ಈ ಪ್ರಕರಣ ಮತ್ತೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಕಳೆದ ಹಲವು ವರ್ಷಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಗಳ ಕುರಿತು ತನಿಖೆ ತೀವ್ರಗೊಳ್ಳುವ ಸಾಧ್ಯತೆ ಇದೆ ಮತ್ತು ಪೊಲೀಸರ ನಿರ್ಲಕ್ಷದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.