ಬೆಂಗಳೂರು: ಆಗಸ್ಟ್ 6 ಮತ್ತು 7, 2025 ರಂದು ಕಂಪನಿಯೊಂದರ ಅಕೌಂಟ್‌ನಿಂದ ಹಲವಾರು ಅನಧಿಕೃತ ಹಣ ವರ್ಗಾವಣೆ ನಡೆದಿದ್ದು, ಕೇವಲ ಎರಡು ದಿನಗಳಲ್ಲಿ ವಂಚಕರು 48 ಕೋಟಿ ರೂಪಾಯಿ ಹ್ಯಾಕ್ ಮಾಡುವ ಮೂಲಕ ಕದ್ದಿದ್ದಾರೆ.
ಆರೋಪಿಗಳಾದ ರಶೀದ್ ಅತ್ತರ್ (27) ಮತ್ತು ಸಂಜಯ್ ಪಟೇಲ್ (43) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ವಿಸ್ಡಮ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ (Wisdom Finance Pvt. Ltd) ಕಂಪನಿಯ ಅಕೌಂಟ್‌ನಿಂದ ಹಣವನ್ನು ವಿದೇಶದಲ್ಲಿರುವ ವಿವಿಧ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿದ್ದರು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಒಟ್ಟು 1,782 ಹಣ ವರ್ಗಾವಣೆಗಳನ್ನು 656 ವಿಭಿನ್ನ ಬ್ಯಾಂಕ್ ಅಕೌಂಟ್‌ಗಳಿಗೆ ಮಾಡಿದ್ದಾರೆ. ಇದರಲ್ಲಿ 27.39 ಲಕ್ಷ ರೂಪಾಯಿಯನ್ನು ಒಬ್ಬ ವ್ಯಕ್ತಿಯ SBI ಅಕೌಂಟ್‌ಗೆ ವರ್ಗಾವಣೆ ಮಾಡಿದ್ದು, ಆತನನ್ನೂ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ದುಬೈಯಲ್ಲಿರುವ ವ್ಯಕ್ತಿಯೊಬ್ಬ ಹಾಂಗ್ ಕಾಂಗ್‌ನ ಸೈಬರ್ ವಂಚಕರನ್ನು ಬಾಡಿಗೆ ಪಡೆದು ಈ ಕೃತ್ಯವನ್ನು ಎಸಗಿಸಿದ್ದಾನೆ.
ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದು, ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಹಾಗೂ ಸೈಬರ್ ಭದ್ರತಾ ವಿಭಾಗ ಜನರಿಗೆ ಈ ರೀತಿಯ ವಂಚನೆಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಕುರಿತು ಜಾಗೃತಿ ಮೂಡಿಸುತ್ತಿದೆ.





