ಮಂಗಳೂರು: ಗಾಯಾಳು ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ದಾರಿ ಬಿಡದೆ ಪುಂಡಾಟಿಕೆ ಮೆರೆದಿದ್ದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ನಿವಾಸಿ ಮೊಹಮದ್ ಮನ್ಸೂರ್(38) ವಶಕ್ಕೆ ಪಡೆಯಲಾಗಿದೆ.
ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಸಮೀಪ ಗುರುವಾರ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ದ್ವಿಚಕ್ರ ವಾಹನ ಸವಾರ ಮನ್ಸೂರ್ ಅಡ್ಡಿಪಡಿಸಿದ್ದ. ಸುಮಾರು 3-4 ಕಿ.ಮೀ. ದೂರದವರೆಗೆ ಆಂಬುಲೆನ್ಸ್ ಗೆ ದಾರಿ ಬಿಡದೆ ಮುಂದೆ ಸಾಗಿ ಅಡ್ಡಿಪಡಿಸಿದ್ದ.
ಗುರುವಾರ ಬಿಸಿಲೆ ಘಾಟ್ ನಲ್ಲಿ ಅಪಘಾತ ಸಂಭವಿಸಿದ್ದು, ಗಾಯಾಳುಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆಂಬುಲೆನ್ಸ್ ನ ಸೈರನ್ ಶಬ್ದ ಕೇಳಿದರೂ ದಾರಿ ಬಿಟ್ಟು ಕೊಡದೆ ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾನೆ. ಈ ಹುಚ್ಛಾಟದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪಿ ಸ್ಕೂಟರ್ ಸವಾರನನ್ನು ವಶಕ್ಕೆ ಪಡೆದು ಸ್ಕೂಟರ್ ಜಪ್ತಿ ಮಾಡಲಾಗಿದೆ. ಬಂಟ್ವಾಳ ಠಾಣೆಯಲ್ಲಿ ಮನ್ಸೂರ್ ವಿರುದ್ಧ ಪ್ರಕರಣ ದಾಖಲಾಗಿದೆ.
 
                            
 
                            



