ಮಂಗಳೂರು: ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಹೆದ್ದಾರಿಯ ಬಳಿಕ ಈಗ ನಗರದ ರಸ್ತೆಗೂ ಟೋಲ್ ಅಳವಡಿಕೆ ಮಾಡಲು ಮುಂದಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಮಂಗಳೂರಿನ ಕದ್ರಿ ಪಾರ್ಕ್ ರಸ್ತೆಯಲ್ಲಿ ಟೋಲ್ ಶುಲ್ಕ ವಿಧಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂಬ ಮಾಹಿತಿ ಹೊರಬಂದಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸುಮಾರು ₹12 ಕೋಟಿ ವೆಚ್ಚದಲ್ಲಿ ಕದ್ರಿ ಪಾರ್ಕ್ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ಭಾಗದ ರಸ್ತೆ ಮತ್ತು ಪಾರ್ಕ್‌ನ ಅಭಿವೃದ್ಧಿ ಕೆಲಸವನ್ನು ‘ಅಮರ್ ಇನ್‌ಫ್ರಾ’ ಕಂಪನಿ ಕೈಗೆತ್ತಿಕೊಂಡಿದೆ.
ರಸ್ತೆಯ ಬಳಿಯ ಅಂಗಡಿಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಪಾರ್ಕ್‌ಗೆ ಎಂಟ್ರಿಯಾಗುವ ಎರಡೂ ಕಡೆಗಳಲ್ಲಿ ಅತ್ಯಾಧುನಿಕ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ (ANPR) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈ ರಸ್ತೆ ಮೂಲಕ ಪ್ರಯಾಣಿಸುವ ವಾಹನಗಳು 5 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತಿದ್ದರೆ, ಫಾಸ್ಟ್ ಟ್ಯಾಗ್ ಮೂಲಕ ₹50 ಕಟ್ ಆಗಲಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.
ಆದರೆ, ಮಂಗಳೂರು ಸ್ಮಾರ್ಟ್ ಸಿಟಿ ಎಂ.ಡಿ. ಅರುಣ್ ಪ್ರಭ ಅವರು, “ಇದು ಟೋಲ್ ವಿಚಾರವಲ್ಲ. ವಾಹನಗಳ ಚಲನವಲನದ ಮಾಹಿತಿ ಸಂಗ್ರಹಿಸಲು ಮಾತ್ರ ಎಎನ್‌ಪಿಆರ್ ಕ್ಯಾಮೆರಾ ಬಳಸುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಇದಾದರೂ, ಸ್ಥಳೀಯರು ಕದ್ರಿ ಪಾರ್ಕ್ ಹೆಸರಿನಲ್ಲಿ ಜನರ ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.





