'ದೈವ ನುಡಿದದ್ದು ನಿಜವಾಯಿತು' – ಕೆಡೆಂಜೊಡಿತ್ತಾಯಿ ದೈವದ 'ನುಡಿ'ಯನ್ನು ಹೊಗಳಿದ ಜನಾರ್ದನ ರೆಡ್ಡಿ

  • 15 Jun 2025 01:18:38 AM

ಕಡಬ: ಕರಾವಳಿಯಲ್ಲಿ ದೈವದ ನುಡಿ ಆದರೆ ದೇವರು ಅಥವಾ ದೈವ ತಾನೇ ನುಡಿದ ಶಬ್ದವೆಂದು ನಂಬಿಕೆ. ನೇಮೋತ್ಸವ ಅಥವಾ ಭೂತಾರಾಧನೆ ಸಂದರ್ಭದಲ್ಲಿ ದೈವವಾಣಿ ಪ್ರಕಟಣೆಯಾದರೆ ಅದನ್ನು ಸ್ಥಳೀಯರು ಅದನ್ನು ಶ್ರದ್ದೆಯಿಂದ ಆಲಿಸುತ್ತಾರೆ ಮತ್ತು ಪಾಲಿಸುತ್ತಾರೆ.

 

ಇದೀಗ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಯವರಿಗೆ ಅವರ ಅನುಪಸ್ಥಿತಿಯಲ್ಲಿ ದೈವ ನುಡಿದ ಆ ಒಂದು ದೈವವಾಣಿ ನಿಜವಾಗಿದೆ ಎಂದು ಸ್ವತಃ ಜನಾರ್ದನ ರೆಡ್ಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ. ತನಗೆ ದೈವ ನುಡಿದ ದಿನದ ಒಳಗಡೆ ಜಾಮೀನು ಸಿಕ್ಕಿ ನಾನು ಜೈಲಿನಿಂದ ಹೊರ ನಡೆಯುವಂತಾಗಿದೆ ಎಂದು ಹೇಳಿದ್ದಾರೆ.

 

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ದೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಸ್ಥಾನದಲ್ಲಿ ಮೇ ತಿಂಗಳ 13 ರಂದು ಬ್ರಹ್ಮಕಲಶೋತ್ಸವ ಸಮಾರಂಭ ನಡೆದಿತ್ತು. ಈ ಸಮಾರಂಭಕ್ಕೆ ಶಾಸಕ ಜನಾರ್ದನ ರೆಡ್ಡಿಯವರನ್ನು ಮುಖ್ಯ ಅಥಿತಿಯಾಗಿ ಆಹ್ವಾನಿಸಿದ್ದರು.

 

ವಿಪರ್ಯಾಸವೆಂದರೆ, ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಹೈದರಾಬಾದ್ ನಲ್ಲಿರುವ ಸಿಸಿಬಿ ನ್ಯಾಯಾಲಯವು ಮೇ 06 ರಂದು ಅವರಿಗೆ 7 ವರ್ಷದ ಶಿಕ್ಷೆ ವಿಧಿಸಿತ್ತು. ತೀರ್ಪು ಹೊರಬಂದ ಕೂಡಲೇ ಜನಾರ್ದನ ರೆಡ್ಡಿಯನ್ನು ಬಂಧಿಸಲಾಗಿತ್ತು. ಆದ್ದರಿಂದ ಜನಾರ್ದನ ರೆಡ್ಡಿಗೆ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ಭಾಗವಹಿಸಲು ಸಾಧ್ಯವಾಗಲಿಲ್ಲ.

 

ಜನಾರ್ದನ ರೆಡ್ಡಿಯವರ ಅನುಪಸ್ಥಿತಯಲ್ಲಿ ಅಲ್ಲಿನ ಗ್ರಾಮಸ್ಥರು, ಇವರ ಜೈಲಿನ ಬಗ್ಗೆ ದೈವದ ಮುಂದಿಟ್ಟು ಪ್ರಶ್ನೆ ಕೇಳಿದಾಗ ದೈವ 'ಅವರು ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ' ಎಂದು ದೈವವು ನುಡಿದಿತ್ತು. ವಿಸ್ಮಯವಂತೆ ಕೇವಲ 27 ದಿನದ ಒಳಗೆ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಜಾಮೀನು ನೀಡಿ ಬಿಡುಗಡೆ ಮಾಡಿತ್ತು.

 

'ದೈವ ನುಡಿದಂತೆ ನಾನು 27 ದಿನಕ್ಕೆ ಬಿಡುಗಡೆಯಾಗಿದ್ದೆ. ಇದು ಕಾರ್ಣಿಕ ದೈವ ಕೆಡೆಂಜೊಡಿತ್ತಾಯಿ ದೈವದ ಅನುಗ್ರಹ' ಎಂದು ಶಾಸಕ ಜನಾರ್ದನ ರೆಡ್ಡಿ ತನ್ನ ಪೋಸ್ಟ್ ನಲ್ಲಿ ಬರೆದಿದ್ದಾರೆ. 'ನಂಬಿದರೆ ಇಂಬು' ಎನ್ನುವ ಮಾತು ಕರಾವಳಿಗೆ ಸಂಬಂಧಿಸಿದಂತೆ ಬಹಳಷ್ಟು ಭಾರಿ ಸಾಬೀತಾಗಿದೆ.

 

'ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ದೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಸ್ಥಾನದಲ್ಲಿ ಮೇ ತಿಂಗಳ 13 ರಂದು ನಡೆಯಬೇಕಿದ್ದ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ ಬಂಧನದ ಕಾರಣದಿಂದ ನಾನು ಭಾಗವಹಿಸಲಾಗಿಲ್ಲ' ಎಂದು ಜನಾರ್ದನರೆಡ್ಡಿ ಬರೆದಿದ್ದಾರೆ.

 

'ಮೇ ತಿಂಗಳ 15ರಂದು ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ದೈವದ ಬಳಿ ಗ್ರಾಮಸ್ಥರು ಕೇಳಿದಾಗ ಜನಾರ್ದನ ರೆಡ್ಡಿ ಅವರು ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ' ಎಂದು ದೈವವು ನುಡಿದಿತ್ತು.