20 June 2025 | Join group

ತನುಷ್ ಕೋಟ್ಯಾನ್ ಗೆ ಒಲಿಯದ ಅದೃಷ್ಟ : ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕಿಲ್ಲ ಎಂಟ್ರಿ

  • 25 May 2025 03:27:36 PM

England Test 2025: ಉದಯೋನ್ಮುಖ ಆಟಗಾರ ತನುಷ್ ಕೋಟ್ಯಾನ್ ಗೆ ಮುಂಬರುವ ಇಂಗ್ಲೆಂಡ್ ಟೆಸ್ಟ್ ಸೀರೀಸ್ ಗೆ ಅವಕಾಶ ಸಿಗಲಿಲ್ಲ. ಡಿಸೆಂಬರ್ 2024 ರಲ್ಲಿ ಆರ್. ಅಶ್ವಿನ್ ನಿವೃತ್ತಿ ಘೋಷಿಸಿದ ನಂತರ ತನುಷ್ ಕೋಟ್ಯಾನ್ ಟೆಸ್ಟ್ ತಂಡಕ್ಕೆ ಪದಾರ್ಪಣೆಗೈದಿದ್ದರು. ಬ್ರಿಸ್ಬೇನ್ ಟೆಸ್ಟ್ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ರವಿಚಂದ್ರನ್ ಅಶ್ವಿನ್ ಅವರ ಸ್ಥಾನವನ್ನು ಅಲಂಕರಿಸಲಿದ್ದರು. 2024 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತನುಷ್ ಕೋಟ್ಯಾನ್ ಅವರನ್ನು ಭಾರತದ ತಂಡಕ್ಕೆ ಸೇರಿಸಲಾಯಿತು.

 

ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ಭಾರತೀಯ ಕ್ರಿಕೆಟಿಗ ತನುಷ್ ಬಲಗೈ ಬ್ಯಾಟಿಂಗ್ ಮತ್ತು ಆಫ್ ಸ್ಪಿನ್ ಬೌಲಿಂಗ್ ಮಾಡುವ ಬೌಲಿಂಗ್ ಆಲ್‌ರೌಂಡರ್ ಆಗಿದ್ದಾರೆ. ಕೋಟ್ಯಾನ್ ಹುಟ್ಟಿ ಬೆಳೆದದ್ದು ಮುಂಬೈನ ಚೆಂಬೂರಿನಲ್ಲಿ. ಅವರ ಹೆತ್ತವರಾದ ಕರುಣಾಕರ್ ಕೋಟ್ಯಾನ್ ಮತ್ತು ಮಲ್ಲಿಕಾ ಕೋಟ್ಯಾನ್ ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯ ಪಾಂಗಾಳ ಗ್ರಾಮದವರಾಗಿದ್ದಾರೆ.

 

ಜೂನ್ 20 ರಿಂದ ಶುರುವಾಗಲಿರುವ ಭಾರತ - ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಗೆ ನಿನ್ನೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಕಳೆದ ಬಾರಿ ಟೆಸ್ಟ್ ತಂಡದಲ್ಲಿದ್ದ 8 ಆಟಗಾರರನ್ನು ಕೈಬಿಡಲಾಗಿದೆ. 18 ಸದಸ್ಯರುಗಳ ಭಾರತೀಯ ಟೆಸ್ಟ್ ತಂಡವನ್ನು ಶುಭ್ ಮನ್ ಗಿಲ್ ನಾಯಕನಾಗಿ ಮತ್ತು ಪಂತ್ ಉಪನಾಯಕನಾಗಿ ಮುನ್ನಡೆಸಲಿದ್ದಾರೆ. ಟೆಸ್ಟ್ ಪಂದ್ಯಗಳಿಗೆ ವಿದಾಯ ಹೇಳಿದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಆರ್ ಅಶ್ವಿನ್ ಸೇರಿದಂತೆ ಹರ್ಷಿತ್ ರಾಣಾ, ಸರ್ಫಾರಾಜ್ ಖಾನ್, ದೇವದತ್ ಪಡಿಕಲ್, ಶಮಿ ಮತ್ತು ತನುಷ್ ಕೋಟ್ಯಾನ್ ರವರನ್ನು ತಂಡದಿಂದ ಕೈಬಿಡಲಾಗಿದೆ.