IPL 2025 : ಹದಿನೆಂಟು ವರ್ಷಗಳ ನಿರೀಕ್ಷೆ, ನಿರಾಸೆಗಳ ಕಾಲಚಕ್ರ, ಅಭಿಮಾನಿಗಳ ಅನುಬಂಧ – ಇವೆಲ್ಲವನ್ನೂ ಮೀರಿ, 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದೆ. ಹಳೆ ಹಾದಿಗಳಲ್ಲಿ ಇಳಿದಿರುವ ಸೋಲಿನ ಗುರುತುಗಳ ಮೇಲೆ ಜಯದ ಹೂವಿನ ಹಾರವೊಂದು ಹಾಕಲಾಗಿದೆ.ಎಷ್ಟು ವರ್ಷಗಳ ನಿರೀಕ್ಷೆ, ಎಷ್ಟು ಕಣ್ಣೀರು, ಇವತ್ತು ಎಲ್ಲಾ ಸಂತೋಷದ ನಗೆಗೆ ಪರಿವರ್ತಿತವಾಗಿದೆ.
ವಿರಾಟ್ ಕೊಹ್ಲಿ ಅವರ ಕಣ್ಣಲ್ಲಿ ನೀರಾಯಿತು. ಆದರೆ ಈ ಬಾರಿ ಅದು ದುಃಖದ ನೀರಲ್ಲ – ಅದು ಸಂತೋಷದ ನೀರಾಗಿತ್ತು. RCB ಜಯ ಕೇವಲ ಒಂದು ಐಪಿಎಲ್ ಜಯವಾಗಿರಲಿಲ್ಲ, ಇದು ಅಭಿಮಾನಿಗಳು, ಆಟಗಾರರು ಮತ್ತು ಕನ್ನಡಿಗರ ಹೃದಯದಲ್ಲಿ ಮೂಡಿದ ಕನಸು. ಆಟದ ಬಳಿಕ ಅವರು ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ವೇದಿಕೆಗೆ ಆಹ್ವಾನಿಸಿ, RCB ಇತಿಹಾಸದ ಒತ್ತಾಸೆಯನ್ನೇ ತೋರಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ವಿಜೃಂಭಣೆಯ ಪಥಸಂಚಲನ
ಈ ಐತಿಹಾಸಿಕ ಗೆಲುವನ್ನು ನಗರದ ಜನರೊಂದಿಗೆ ಹಂಚಿಕೊಳ್ಳಲು RCB ತಂಡವು ಇಂದು 2025ರ ಜೂನ್ 4ರಂದು, ಪಥಸಂಚಲನ ಹಮ್ಮಿಕೊಂಡಿದೆ. ಇಂದು ಮದ್ಯಾಹ್ನ 3 ಗಂಟೆಯಿಂದ ಬೆಂಗಳೂರಿನ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವದ ಮೆರವಣಿಗೆ ನಡೆಯಲಿದೆ.
RCB ಗೆಲುವು ಕೇವಲ ಟ್ರೋಫಿಗೆ ಅಲ್ಲ, ಅದು ಅಭಿಮಾನಿಗಳ ತಾಳ್ಮೆ, ನಂಬಿಕೆ ಮತ್ತು ಪ್ರೀತಿಗೆ ಸಂದ ಗೌರವ. 2008ರಲ್ಲಿ ಆರಂಭವಾದ ಐಪಿಎಲ್ನಲ್ಲಿ RCB ಮೂರು ಬಾರಿ ಫೈನಲ್ಗೆ ಪ್ರವೇಶಿಸಿ ಸೋತರೂ, ನಾಲ್ಕನೇ ಪ್ರಯತ್ನದಲ್ಲಿ ಕೊನೆಗೂ ಕಪ್ ಗೆದ್ದಿದೆ. ಈ ಐತಿಹಾಸಿಕ ಗೆಲುವು ಇಡೀ ಕರ್ನಾಟಕದ ಹಬ್ಬದ ವಾತಾವರಣವನ್ನೇ ಸೃಷ್ಟಿಸಿದೆ. ಕೊನೆಗೂ ನಂಬರ್ 18ರ ಲೆಕ್ಕಾಚಾರ ಸತ್ಯವಾಯಿತು.