10 December 2025 | Join group

ಹಮಾಸ್ ಮಾದರಿಯ ಡ್ರೋನ್–ರಾಕೆಟ್ ದಾಳಿಗೆ ಭಾರತದಲ್ಲೇ ಸಿದ್ಧತೆ: NIA ಬಯಲಿಗೆಳೆದ ಭಯಾನಕ ಪಿತೂರಿ!

  • 18 Nov 2025 09:50:09 AM

ದೆಹಲಿ: ಕೆಂಪುಕೋಟೆ ಸ್ಫೋಟದ ತನಿಖೆ ನೂತನ ದಿಕ್ಕನ್ನು ತೆಗೆದುಕೊಂಡಿದ್ದು, ಕಳೆದ 48 ಗಂಟೆಗಳಲ್ಲಿ ನಡೆದ ಎರಡು ಪ್ರಮುಖ ಬಂಧನಗಳ ನಂತರ ಹಮಾಸ್ ಶೈಲಿಯ ಭಯೋತ್ಪಾದಕ ತಂತ್ರಗಳನ್ನು ನಕಲು ಮಾಡಲು ಮಾಡ್ಯೂಲ್ ಸಿದ್ಧತೆ ನಡೆಸುತ್ತಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಹಿರಂಗಪಡಿಸಿದೆ.

 

ಇಂಡಿಯಾ ಟುಡೇ ವರದಿ ಪ್ರಕಾರ, ಆರಂಭದಲ್ಲಿ ಈ ಗುಂಪು ಡ್ರೋನ್‌ಗಳನ್ನು ರಾಕೆಟ್‌ಗಳನ್ನು ಹೊತ್ತೊಯ್ಯುವಂತೆ ತಂತ್ರಜ್ಞಾನ ಬದಲಾವಣೆ ನಡೆಸಿ ದೆಹಲಿ ಮತ್ತು ಇತರ ಅತಿ–ಸಂವೇದನಾಶೀಲ ವಲಯಗಳಲ್ಲಿ ರಾಕೆಟ್ ಬಾಂಬ್ ದಾಳಿ ನಡೆಸುವ ಉದ್ದೇಶ ಹೊಂದಿತ್ತು.

 

NIA ತನಿಖೆ ಪ್ರಕಾರ, ಆರೋಪಿಗಳು ಡ್ರೋನ್ ತಂತ್ರಜ್ಞಾನವನ್ನು ಮಾರ್ಪಡಿಸಿ, ಹಮಾಸ್ ಮತ್ತು ಐಸಿಸ್‌ ಬಳಸುವಂತೆಯೇ ಆಕಾಶಮಾರ್ಗದಿಂದ ಸ್ಫೋಟಕ ಉಡಾಯಿಸುವ ವ್ಯವಸ್ಥೆಯನ್ನು ರಚಿಸಲು ಶ್ರಮಿಸುತ್ತಿದ್ದರು. ಈ ವಿಧಾನವು ಸಾಮೂಹಿಕ ಸಾವುನೋವು ಮತ್ತು ವ್ಯಾಪಕ ಭೀತಿಯನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

 

ವಿಚಾರಣೆ ಬಳಿಕ NIA ಹೇಳುವಂತೆ, ಡ್ರೋನ್–ರಾಕೆಟ್ ಸಂಚು ವಿಫಲವಾದ ನಂತರ, ಈ ಮಾಡ್ಯೂಲ್ ಕಾರ್ ಬಾಂಬ್ ಮೂಲಕ ದಾಳಿ ಮಾಡಲು ನಿರ್ಧರಿಸಿತು. ದೆಹಲಿಯ ಕೆಂಪು ಕೋಟೆಯ ಸಮೀಪ ಜನಸಂಚಾರ ಹೆಚ್ಚಾಗಿರುವ ರಸ್ತೆಯಲ್ಲಿ ವಿಸ್ಪೋಟಕವನ್ನು ತುಂಬಿದ್ದ ಹುಂಡೈ i20 ಸ್ಫೋಟಗೊಂಡು 14 ಜನರು ಮೃತಪಟ್ಟಿದ್ದರು. ಅದಕ್ಕೂ ಕೆಲವೇ ಗಂಟೆಗಳ ಮೊದಲು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಬಳಿಯ ವಸತಿಗೃಹದಿಂದ ಪೊಲೀಸರಿಗೊಂದು ಬೃಹತ್ ಪ್ರಮಾಣದ ಸ್ಫೋಟಕ ವಸ್ತುಗಳು ಸಿಕ್ಕಿದ್ದವು.