ಮೂಡುಬಿದಿರೆ: ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಕಂಬಳ ಸಮಿತಿಗೆ ನೂತನ ಅಧ್ಯಕ್ಷರಾಗಿ ಮೂಡುಬಿದಿರೆಯ ಹೊಸಬೆಟ್ಟು ಏರಿಮಾರು ಬರ್ಕೆಯ ಚಂದ್ರಹಾಸ್ ಸಾಧು ಸನಿಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರೆಂಜಾಳದ ವಿದ್ಯಾಧರ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು. ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ 2026ರಿಂದ 2029ರವರೆಗಿನ ಕಂಬಳ ಋತುವಿನ ದಿನಾಂಕಗಳ ಬಗ್ಗೆ ಚರ್ಚೆ ನಡೆಸಿ ತಾತ್ಕಾಲಿಕ ವೇಳಾಪಟ್ಟಿಯ ರೂಪುರೇಷೆ ಸಿದ್ಧಪಡಿಸಲಾಯಿತು. ಮುಂದಿನ ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ಮುನ್ನಡೆಸುವ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಜಿಲ್ಲಾ ಮಟ್ಟದ ಅಧಿಕೃತ ಕಂಬಳಗಳ ಪಟ್ಟಿಗೆ ಸೇರಿಸಲು ಸಲ್ಲಿಕೆಯಾಗಿರುವ ಹೊಸ ಅರ್ಜಿಗಳ ಪರಿಶೀಲನೆ ಮತ್ತು ಮುಂದಿನ ಕ್ರಮಗಳ ಕುರಿತೂ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಂಬಳ ಓಟಗಾರರು, ತೀರ್ಪುಗಾರರು ಮತ್ತು ಪರಿಚಾರಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರದ ವಿಶೇಷ ಅನುದಾನ ಪಡೆಯಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ಸಂಬಂಧ ಸುಮಾರು 15 ಬಾರಿ ಬೆಂಗಳೂರಿಗೆ ಭೇಟಿ ನೀಡಿ ಅಶೋಕ್ ಕುಮಾರ್ ರೈ, ಐವನ್ ಡಿಸೋಜ ಹಾಗೂ ಸುನಿಲ್ ಕುಮಾರ್ ಅವರ ಸಹಯೋಗದೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹಾಗೂ ಕ್ರೀಡಾ ಸಚಿವ ನಾಗೇಂದ್ರ ಅವರನ್ನು ಭೇಟಿ ಮಾಡಿ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆ ಕೇವಲ 10 ಕಂಬಳಗಳಿಗೆ ತಲಾ 5 ಲಕ್ಷ ರೂಪಾಯಿ ಅನುದಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಲಾಗಿದ್ದು, ಕ್ರೀಡಾ ಇಲಾಖೆಯಿಂದ ಬಿಡುಗಡೆಯಾದ 40 ಲಕ್ಷ ರೂಪಾಯಿಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಪಟ್ಲ ಫೌಂಡೇಶನ್ ಸಹಯೋಗದಲ್ಲಿ ಕಂಬಳ ಪರಿಚಾರಕರು, ತೀರ್ಪುಗಾರರು ಹಾಗೂ ಓಟಗಾರರಿಗೆ ವಿಮಾ ಸೌಲಭ್ಯ ಒದಗಿಸುವ ಯೋಜನೆಯೂ ರೂಪುಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚೂರು ಕಲ್ಕುಡೆ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಸಭೆಯಲ್ಲಿ ತೀರ್ಪುಗಾರರ ಸಂಚಾಲಕ ವಿಜಯಕುಮಾರ್ ಕಂಗಿನಮನೆ, ಗೌರವಾಧ್ಯಕ್ಷ ರೋಹಿತ್ ಹೆಗ್ಡೆ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಗೌರವ ಸಲಹೆಗಾರ ಶಾಂತರಾಮ್ ಶೆಟ್ಟಿ, ಉಪ್ಪಿನಂಗಡಿ ಕಂಬಳದ ಸ್ಥಾಪಕ ಅಧ್ಯಕ್ಷ ಉಮೇಶ್ ಶಣೈ ಸೇರಿದಂತೆ ವಿವಿಧ ಕಂಬಳ ಸಮಿತಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
2026-27ನೇ ಸಾಲಿನ ಕಂಬಳ ಋತುವಿನ ತಾತ್ಕಾಲಿಕ ವೇಳಾಪಟ್ಟಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:ಕಂಬಳ ಕ್ಯಾಲೆಂಡರ್ 2026-27 ಪ್ರಕಟ: ಯಾವ ಊರಲ್ಲಿ ಯಾವ ದಿನ ಕಂಬಳ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಈ ವೇಳಾಪಟ್ಟಿಯ ಪ್ರಕಾರ ಕಂಬಳಗಳ ದಿನಾಂಕಗಳನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಸಾಣೂರು, ಕಡಂದಲೆ, ಸಸಿಹಿತ್ತು, ಬೈಂದೂರು ಹಾಗೂ ಶಿರ್ವ ಕಂಬಳಗಳ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಬೇಕಿದ್ದು, ಬಳಿಕ ಅಧಿಕೃತ ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ.





