ರಾಜ್ಯದಲ್ಲಿ ಏಪ್ರಿಲ್ 16ರಿಂದ ಮನೆಗಣತಿ ಪ್ರಾರಂಭ; 2.5 ಲಕ್ಷ ನೌಕರರಿಗೆ ತರಬೇತಿ

  • 08 Apr 2026 12:29:06 AM

ಬೆಂಗಳೂರು: ರಾಜ್ಯವ್ಯಾಪಿ ಮನೆಗಣತಿ ಪ್ರಕ್ರಿಯೆ ಏಪ್ರಿಲ್ 16ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಮೇ 15ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮನೆಮನೆಗೆ ಭೇಟಿ ನೀಡಿ ಕುಟುಂಬಗಳ ಸಾಮಾಜಿಕ, ಆರ್ಥಿಕ ಹಾಗೂ ಮೂಲಭೂತ ಮಾಹಿತಿ ಸಂಗ್ರಹಿಸಲಾಗುತ್ತದೆ.

 

ಮನೆಗಣತಿ ಕಾರ್ಯಕ್ಕಾಗಿ ರಾಜ್ಯದಾದ್ಯಂತ ಸುಮಾರು 2.5 ಲಕ್ಷ ಸರ್ಕಾರಿ ನೌಕರರಿಗೆ ಏಕಕಾಲದಲ್ಲಿ ತರಬೇತಿ ನೀಡಲಾಗುತ್ತಿದೆ. ಶಿಕ್ಷಕರು, ಗ್ರಾಮಪಂಚಾಯತ್ ಸಿಬ್ಬಂದಿ, ವಿವಿಧ ಇಲಾಖೆ ನೌಕರರು ಸೇರಿದಂತೆ ಹಲವು ವರ್ಗದ ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ.

 

ಈ ಹಿನ್ನೆಲೆಯಲ್ಲಿ ಕೆಲ ಸರ್ಕಾರಿ ಕಚೇರಿಗಳ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ತರಬೇತಿ ಹಾಗೂ ಗಣತಿ ಕಾರ್ಯದ ಅವಧಿಯಲ್ಲಿ ಸಾಮಾನ್ಯ ಆಡಳಿತ ಕಾರ್ಯಗಳಲ್ಲಿ ವಿಳಂಬವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಮನೆಗಣತಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ. ಸಂಗ್ರಹಿಸಲಾಗುವ ಮಾಹಿತಿಯನ್ನು ಗೌಪ್ಯವಾಗಿ ಕಾಯ್ದಿರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.