22 June 2026 |

ತಮಿಳುನಾಡಿನಲ್ಲಿ ತಂದೆ–ಮಗ ಕಸ್ಟಡಿಯಲ್ಲಿ ಸಾವು ಪ್ರಕರಣ: 9 ಪೊಲೀಸರಿಗೆ ಗಲ್ಲು ಶಿಕ್ಷೆ, ಐತಿಹಾಸಿಕ ನಿರ್ಧಾರ

  • 08 Apr 2026 12:33:24 AM

ಮಧುರೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಲಂನಲ್ಲಿ ನಡೆದ ತಂದೆ–ಮಗ ಕಸ್ಟೋಡಿಯಲ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಮಧುರೈ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿಗಳಾದ ಒಂಬತ್ತು ಪೊಲೀಸರಿಗೆ ಮರಣದಂಡನೆ ವಿಧಿಸಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

 

2020ರ ಜೂನ್ 19ರಂದು ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಅಂಗಡಿ ತೆರೆದಿದ್ದಾರೆ ಎಂಬ ಆರೋಪದ ಮೇರೆಗೆ ತಂದೆ ಪಿ. ಜಯರಾಜ್ ಮತ್ತು ಮಗ ಜೆ. ಬೆನ್ನಿಕ್ಸ್ ಬಂಧಿಸಲಾಗಿತ್ತು. ಬಂಧನದ ಬಳಿಕ ಪೊಲೀಸ್ ಠಾಣೆಯಲ್ಲಿ ಅಮಾನವೀಯ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

 

ತೀವ್ರ ಹಲ್ಲೆಗೊಳಗಾದ ಮಗ ಜೂನ್ 22ರಂದು ಹಾಗೂ ತಂದೆ ಜೂನ್ 23ರಂದು ಸಾವನ್ನಪ್ಪಿದ್ದರು. ಈ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಮಾನವ ಹಕ್ಕು ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಿಂದ ನ್ಯಾಯದ ಬೇಡಿಕೆ ಜೋರಾಗಿತ್ತು.

 

ದೀರ್ಘ ವಿಚಾರಣೆಯ ಬಳಿಕ ಇದೀಗ ಮಧುರೈ ನ್ಯಾಯಾಲಯವು ಇನ್ಸ್‌ಪೆಕ್ಟರ್ ಸೇರಿದಂತೆ ಒಂಬತ್ತು ಪೊಲೀಸ್ ಸಿಬ್ಬಂದಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಕಾನೂನು ಇತಿಹಾಸದಲ್ಲೇ ಮಹತ್ವದ ತೀರ್ಪಾಗಿ ಪರಿಗಣಿಸಲಾಗಿದೆ.