ಕುಸಿದ ತರಕಾರಿ ಬೆಲೆ; ಬಡ ರೈತರಿಗೆ ಬರೆ

  • 08 Apr 2026 12:38:38 AM

ಬೆಂಗಳೂರು: ತರಕಾರಿ ದರದಲ್ಲಿ ಏಕಾಏಕಿ ಉಂಟಾದ ಕುಸಿತ ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ಭಾರೀ ಹೊಡೆತ ನೀಡಿದೆ. ಬೇಡಿಕೆ ಕಡಿಮೆಯಾದ ಪರಿಣಾಮವಾಗಿ ಬೆಲೆ ಇಳಿಕೆಯಾಗಿದ್ದು, ಇದರಿಂದ ಬಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

 

ಕೃಷಿ ಮಾರುಕಟ್ಟೆಗಳ ಮೇಲೆ ಕೊಲ್ಲಿ ಯುದ್ಧದ ಬಿಸಿ, ಅಡುಗೆ ಅನಿಲ ಲಭ್ಯತೆಯ ಕೊರತೆ, ಹಲವೆಡೆ ಹೋಟೆಲ್‌ಗಳ ಬಾಗಿಲು ತೆರೆಯದಿರುವುದು ಹಾಗೂ ಪ್ರಯಾಣಿಕರ ಕೊರತೆಯಿಂದ ಸಾಲುಗಟ್ಟಿ ನಿಂತ ಆಟೋಗಳು ಈ ಎಲ್ಲ ಅಂಶಗಳು ಒಟ್ಟಾರೆ ತರಕಾರಿ ಮಾರಾಟದ ಮೇಲೆ ಪರಿಣಾಮ ಬೀರಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

 

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಎಪಿಎಂಸಿ ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗದ್ದಲದ ಬದಲು ನಿಶ್ಶಬ್ದ ವಾತಾವರಣ ಕಾಣಿಸಿಕೊಂಡಿದೆ. ಸರಕು ತರಿಸಿಕೊಂಡ ರೈತರು ಹತಾಶವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಅಥವಾ ವಾಪಸು ತೆಗೆದುಕೊಂಡು ಹೋಗಲು ನಿರ್ಧಾರ ಕೈಗೊಳ್ಳುತ್ತಿರುವುದು ಕಂಡುಬಂದಿದೆ.

 

“ಬೆಳೆ ಬೆಳೆಸಲು ಖರ್ಚು ಹೆಚ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಸಾಗಾಟ ವೆಚ್ಚವೂ ಕೈಕಟ್ಟುವಂತಾಗಿದೆ” ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಘೋಷಣೆ ಅಥವಾ ಖರೀದಿ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಬೇಡಿಕೆ ರೈತ ವಲಯದಿಂದ ಕೇಳಿಬರುತ್ತಿದೆ.