ಕಾಶ್ಮೀರದಲ್ಲಿ ಧ್ವಜ ಹೋರಾಟದಿಂದ ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಕನಸುವರೆಗೆ… 97ರ ಕಾರ್ಯಕರ್ತನ ಕಾಲಿಗೆ ಬಾಗಿದ ಮೋದಿ - ಯಾರು ಮಖನ್ ಲಾಲ್ ಸರ್ಕಾರ್?

  • 09 May 2026 01:19:54 PM

ಪಶ್ಚಿಮ ಬಂಗಾಳ: ಒಮ್ಮೆ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಭಾಗಿಯಾಗಿದ್ದ ವ್ಯಕ್ತಿ… ಇಂದು ತನ್ನ ಜೀವನವೇ ಅರ್ಪಿಸಿದ್ದ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರುತ್ತಿರುವುದನ್ನು 97ನೇ ವಯಸ್ಸಿನಲ್ಲಿ ನೋಡುತ್ತಿದ್ದಾರೆ. ಅದು ಖಂಡಿತವಾಗಿ ಅವರಿಗೆ ಸಾಮಾನ್ಯ ಕ್ಷಣವಾಗಿರಲಿಲ್ಲ.

 

ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೇವಲ ಅಭಿನಂದನೆ ಸಲ್ಲಿಸಲಿಲ್ಲ. ಪಶ್ಚಿಮ ಬಂಗಾಳದ ಸಿಲಿಗುರಿಯ 97 ವರ್ಷದ ಮಖನ್ ಲಾಲ್ ಸರ್ಕಾರ್ ಅವರ ಕಾಲಿಗೆ ಬಾಗಿ ನಮಸ್ಕರಿಸಿ, ಅವರನ್ನು ಬಿಗಿಯಾಗಿ ಅಪ್ಪಿಕೊಂಡ ಕ್ಷಣ ಪ್ರತಿಯೊಬ್ಬ ಕಾರ್ಯಕರ್ತರು ಭಾವುಕರನ್ನಾಗಿ ಮಾಡಿದೆ. ಆ ಒಂದು ಕ್ಷಣದ ಮೂಲಕ ಮೋದಿ ದೇಶದ ಬಿಜೆಪಿ ಕಾರ್ಯಕರ್ತರಿಗೆ ಒಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

 

“ಬಿಜೆಪಿಯಲ್ಲಿ ಹುದ್ದೆಗಿಂತ ಕಾರ್ಯಕರ್ತ ದೊಡ್ಡವರು" - ಸಂದೇಶ 
ಇಂದು ರಾಜಕೀಯದಲ್ಲಿ ನಾಯಕರು ಸುದ್ದಿಯಾಗುತ್ತಾರೆ. ಆದರೆ ಪಕ್ಷವನ್ನು ನೆಲಮಟ್ಟದಿಂದ ಕಟ್ಟಿದ ಕಾರ್ಯಕರ್ತರು ಬಹಳ ಬಾರಿ ಮರೆಯಾಗುತ್ತಾರೆ. ಆದರೆ ಬಿಜೆಪಿ ತನ್ನ ಕಾರ್ಯಕರ್ತರನ್ನು ಮರೆಯುವುದಿಲ್ಲ ಎಂಬುದನ್ನು ಮೋದಿ ಮತ್ತೊಮ್ಮೆ ತೋರಿಸಿದರು.

 

ಯಾರು ಆ ಮಖನ್ ಲಾಲ್ ಸರ್ಕಾರ್?
ಮಖನ್ ಲಾಲ್ ಸರ್ಕಾರ್ ಸಾಮಾನ್ಯ ಕಾರ್ಯಕರ್ತರಲ್ಲ. ಅವರು ಸಾಮಾಜಿಕ ಜಾಲತಾಣಗಳ ಕಾಲಕ್ಕೂ ಮುಂಚೆ, ಟಿವಿ ಚರ್ಚೆಗಳಿಗೂ ಮುಂಚೆ, ಕೇವಲ ಸಿದ್ಧಾಂತದ ಮೇಲೆ ಪಕ್ಷ ಕಟ್ಟಿದ ತಲೆಮಾರಿನವರು. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆಪ್ತ ಸಹಾಯಕರಾಗಿದ್ದ ಅವರು, 1952ರಲ್ಲಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೂ ಒಳಗಾಗಿದ್ದರು.16 ವರ್ಷದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರು ಆಗಿದ್ದರು ಸರ್ಕಾರ್.

 

ಅಷ್ಟೇ ಅಲ್ಲ, ಕಾಂಗ್ರೆಸ್ ಆಡಳಿತದ ಸಮಯದಲ್ಲಿ ದೇಶಭಕ್ತಿ ಗೀತೆ ಹಾಡಿದ್ದಕ್ಕಾಗಿ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು ಎಂಬ ಘಟನೆ ಇಂದಿಗೂ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತದೆ. ನ್ಯಾಯಾಲಯದಲ್ಲಿ ಕ್ಷಮೆ ಕೇಳುವಂತೆ ಹೇಳಿದಾಗ, “ನಾನು ತಪ್ಪೇನೂ ಮಾಡಿಲ್ಲ. ನಾನು ಕೇವಲ ಹಾಡು ಹಾಡಿದ್ದೇನೆ,” ಎಂದು ಅವರು ಉತ್ತರಿಸಿದ್ದರಂತೆ.

 

ಆ ಬಳಿಕ ನ್ಯಾಯಾಧೀಶರು ಅದೇ ಹಾಡನ್ನು ನ್ಯಾಯಾಲಯದಲ್ಲೇ ಹಾಡಲು ಹೇಳಿದಾಗ, ಸರ್ಕಾರ್ ಮತ್ತೊಮ್ಮೆ ಹಾಡಿದರು. ಕೊನೆಯಲ್ಲಿ ಶಿಕ್ಷೆ ವಿಧಿಸುವ ಬದಲು, ಅವರಿಗೆ ಪ್ರಥಮ ದರ್ಜೆ ರೈಲು ಟಿಕೆಟ್ ನೀಡಿ, ಪ್ರಯಾಣಕ್ಕಾಗಿ ₹100 ಕೊಡಲು ಪೊಲೀಸರಿಗೆ ನ್ಯಾಯಾಧೀಶರು ಸೂಚಿಸಿದ್ದರೆಂದು ಬಿಜೆಪಿ ನಾಯಕರು ನೆನಪಿಸಿಕೊಳ್ಳುತ್ತಾರೆ.

 

ಈ ಒಂದು ಘಟನೆ ಅವರ ವ್ಯಕ್ತಿತ್ವವೇ ಹೇಳುತ್ತದೆ.ಭಯವಿಲ್ಲದ ನಿಲುವು, ದೇಶಭಕ್ತಿ ಮತ್ತು ಸಿದ್ಧಾಂತದ ಮೇಲಿನ ನಂಬಿಕೆ. ಪಕ್ಷಕ್ಕಾಗಿ ಜೀವನವೇ ಅರ್ಪಿಸಿದ ಮನಸ್ಸು.1980ರಲ್ಲಿ ಬಿಜೆಪಿ ಸ್ಥಾಪನೆಯಾದ ನಂತರ, ಮಖನ್ ಲಾಲ್ ಸರ್ಕಾರ್ ಪಶ್ಚಿಮ ದಿನಾಜ್ಪುರ, ಜಲ್ಪೈಗುರಿ ಮತ್ತು ದಾರ್ಜಿಲಿಂಗ್ ಜಿಲ್ಲೆಗಳ ಸಂಘಟನಾ ಸಂಯೋಜಕರಾಗಿ ಕೆಲಸ ಮಾಡಿದರು. ಕೇವಲ ಒಂದು ವರ್ಷದಲ್ಲೇ ಸುಮಾರು 10 ಸಾವಿರ ಸದಸ್ಯರನ್ನು ಪಕ್ಷಕ್ಕೆ ಸೇರಿಸಿದ್ದರು ಎನ್ನಲಾಗುತ್ತದೆ. 

 

ಆ ಸಮಯದಲ್ಲಿ ಬಂಗಾಳದಲ್ಲಿ ಬಿಜೆಪಿ ಅಷ್ಟು ಬಲಿಷ್ಠವಾಗಿರಲಿಲ್ಲ. ಅಧಿಕಾರದ ಕನಸೂ ದೂರವಾಗಿತ್ತು. ಆದರೂ ಅವರು ಏಳು ವರ್ಷಗಳ ಕಾಲ ನಿರಂತರವಾಗಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಯಾವುದೇ ಹುದ್ದೆಗಾಗಿ ಅಲ್ಲ, ಪ್ರಚಾರಕ್ಕಾಗಿ ಅಲ್ಲ ಆದರೆ ಒಂದೇ ಕನಸಿನೊಂದಿಗೆ ಪಶ್ಚಿಮ ಬಂಗಾಳದಲ್ಲಿ ಪಕ್ಷ ಉಳಿಯಬೇಕು ಎನ್ನುವುದಾಗಿತ್ತು.

 

ಅದರಲ್ಲೇ ಈ ಕಥೆಯ ಭಾವನೆ ಇದೆ. ಒಬ್ಬ ವ್ಯಕ್ತಿ ತನ್ನ ಸಂಪೂರ್ಣ ಜೀವನವನ್ನೇ ಒಂದು ರಾಜಕೀಯ ಚಳವಳಿಗೆ ಅರ್ಪಿಸುತ್ತಾನೆ, ವರ್ಷಗಳ ಕಾಲ ಪಕ್ಷದ ಸೋಲು ನೋಡುತ್ತಾನೆ, ಜನರ ಟೀಕೆ ಕೇಳುತ್ತಾನೆ ಆದರೆ ಕೊನೆಗೆ 97ನೇ ವಯಸ್ಸಿನಲ್ಲಿ ತನ್ನ ಪಕ್ಷ ಬಂಗಾಳದಲ್ಲಿ ಇತಿಹಾಸ ನಿರ್ಮಿಸುವ ಕ್ಷಣವನ್ನು ನೋಡುತ್ತಾನೆ. ಅದರಿಗಿಂತ ದೊಡ್ಡ ಸಂತೋಷ ಒಬ್ಬ ಕಾರ್ಯಕರ್ತನಿಗೆ ಇನ್ನೇನು ಬೇಕು? ಅಲ್ಲವೇ?

 

ಬಹುಶಃ ಅದಕ್ಕಾಗಿಯೇ ಮೋದಿ ಅವರ ಅಪ್ಪುಗೆ ಸಾಮಾನ್ಯ ರಾಜಕೀಯ ಕ್ಷಣವಾಗಿ ಕಾಣಿಸಲಿಲ್ಲ. ಅದು ಪ್ರಧಾನಿಯೊಬ್ಬರು ಕಾರ್ಯಕರ್ತನಿಗೆ ಗೌರವ ನೀಡಿದ ಕ್ಷಣ ಮಾತ್ರವಲ್ಲ, ಒಂದು ತಲೆಮಾರಿನ ಬಿಜೆಪಿ… ಮತ್ತೊಂದು ತಲೆಮಾರಿಗೆ “ಧನ್ಯವಾದ” ಹೇಳಿದ ಕ್ಷಣವಾಗಿತ್ತು.