ಮಂಗಳೂರು: ಕರಾವಳಿ ನಗರ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಹೋಟೆಲ್‌ಗಳಲ್ಲಿ ಆಹಾರ ದರಗಳು ಮತ್ತೊಮ್ಮೆ ಏರಿಕೆ ಕಂಡಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಏರಿಕೆಯ ಜೊತೆಗೆ ತರಕಾರಿ, ಕೋಳಿ ಮಾಂಸ ಹಾಗೂ ಇತರ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದಾಗಿ ಹೋಟೆಲ್ ಮಾಲೀಕರು ದರ ಪರಿಷ್ಕರಣೆ ಮಾಡಿದ್ದು ಈಗಾಗಲೇ ಹಲವಾರು ಹೋಟೆಲ್ ಗಳಲ್ಲಿ ದರ ಪಟ್ಟಿ ಬದಲಾಗಿದೆ.
ಪ್ರಸ್ತುತ ಮಂಗಳೂರಿನ ಅನೇಕ ಹೋಟೆಲ್‌ಗಳಲ್ಲಿ ಫುಲ್ ಚಿಕನ್ ಬಿರಿಯಾನಿಯ ದರವು ಸುಮಾರು ₹260 ರಿಂದ ₹300 ರವರೆಗೆ ತಲುಪಿದೆ. ಕೆಲವು ಪ್ರಸಿದ್ಧ ಹೋಟೆಲ್‌ಗಳಲ್ಲಿ ಈಗಾಗಲೇ ₹300 ದಾಟಿರುವುದಾಗಿ ಗ್ರಾಹಕರು ಹೇಳುತ್ತಿದ್ದಾರೆ. ಹೋಟೆಲ್ ಉದ್ಯಮದವರ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ತಿಂಗಳಿಗೆ ಸಾವಿರಾರು ರೂಪಾಯಿ ಹೆಚ್ಚುವರಿ ವೆಚ್ಚ ಉಂಟಾಗಿದೆ. ಇದಲ್ಲದೆ ತರಕಾರಿ, ಎಣ್ಣೆ, ಕೋಳಿ ಮಾಂಸ ಹಾಗೂ ಕಾರ್ಮಿಕ ವೇತನದಲ್ಲೂ ಏರಿಕೆ ಕಂಡುಬಂದಿದೆ.
ಈ ಹಿನ್ನೆಲೆದಲ್ಲಿ ಆಹಾರ ಪದಾರ್ಥಗಳ ದರವನ್ನು ಸರಾಸರಿ 10 ರಿಂದ 15 ಶೇಕಡಾ ವರೆಗೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹಲವಾರು ಹೋಟೆಲ್ ಗಳು ಈಗಾಗಲೇ ದರ ಏರಿಕೆ ಮಾಡಿದ್ದಾರೆ. ಮಂಗಳೂರು ಹೋಟೆಲ್ ಮಾಲಕರ ಸಂಘ ದರ ಏರಿಕೆಗೆ ಮನ್ನತಿ ನೀಡಿದೆ. ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಬೆಲೆ ಸುಮಾರು ರೂ. 993 ಗೆ ತಲುಪಿರುವುದೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.
ಗ್ರಾಹಕರ ಮೇಲಿನ ಪರಿಣಾಮ
ಮಧ್ಯಮ ವರ್ಗದ ಕುಟುಂಬಗಳಿಗೆ ಹೊರಗೆ ಊಟ ಮಾಡುವುದು ಈಗಾಗಲೇ ದುಬಾರಿ ಆಯ್ಕೆಯಾಗುತ್ತಿರುವ ಸಮಯದಲ್ಲಿ ಈ ದರ ಏರಿಕೆ ಮತ್ತಷ್ಟು ಹೊರೆ ಆಗಲಿದೆ. ವಾರಾಂತ್ಯಗಳಲ್ಲಿ ಕುಟುಂಬ ಸಮೇತ ಹೋಟೆಲ್‌ಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಹೋಟೆಲ್ ದರ ಏರಿಕೆ ನ್ಯಾಯಸಮ್ಮತವೇ? ಸರ್ಕಾರ ವಾಣಿಜ್ಯ ಗ್ಯಾಸ್ ದರ ಕಡಿತಗೊಳಿಸಬೇಕೇ? ಮಂಗಳೂರಿನಲ್ಲಿ ಆಹಾರ ದರ ನಿಯಂತ್ರಣ ಸಾಧ್ಯವೇ? ಈ ಪ್ರಶ್ನೆಗಳು ಸದ್ಯದ ಮಟ್ಟಿಗೆ ಪ್ರಶ್ನೆಯಾಗಿ ಉಳಿದಿದೆ. ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಪರಿಣಾಮ ವಿಶ್ವದಾದ್ಯಂತ ಕಚ್ಚಾ ತೈಲ ಮತ್ತು ಗ್ಯಾಸ್ ಬೆಲೆಯೇರಿಕೆಯಾಗಿರುವುದು ಇಲ್ಲಿ ಗಮನಾರ್ಹ ಸಂಗತಿ.





