21 June 2025 | Join group

ಬಿಯರ್ ಪ್ರಿಯರಿಗೆ ಶಾಕ್.! ವಿಸ್ಕಿ, ಬ್ರಾಂಡಿ, ಜಿನ್ ಬೆಲೆ ಕೂಡ ಏರಲಿದೆ

  • 01 May 2025 03:22:08 PM

ಬೆಂಗಳೂರು, ಮೇ 01 : ಈ ಉರಿ ಬಿಸಿಲಿಗೆ ಒಂದು ಬಿಯರ್ ಹೊಡೆಯುವ ಎಂದು ವೈನ್ ಶಾಪ್ ಅಥವಾ ಬಾರ್ ಗೆ ಧಾವಿಸುವ ಮದ್ಯ ಪ್ರಿಯರಿಗೆ ಬಿಯರ್ ಮತ್ತು ಇನ್ನಿತರ ಮದ್ಯ ಪ್ರಾಡಕ್ಟ್ ಗಳ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

 

ಬಿಯರ್ ಬೆಲೆ ಈಗಾಗಲೇ ಜಾಸ್ತಿಯಾಗಿದ್ದು, ಮತ್ತಷ್ಟು ಬೆಲೆ ಏರಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ ಕರ್ನಾಟಕ ಅಬಕಾರಿ ಇಲಾಖೆ. ಆದ್ದರಿಂದ ಬಿಯರ್ ಪ್ರಿಯರ ಜೀಬಿಗೆ ಕತ್ತರಿ ಬೀಳಲಿದೆ. ರಾಜ್ಯ ಸರಕಾರದ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳವೇ ಈ ಬೆಲೆ ಏರಿಕೆಗೆ ಕಾರಣವಾಗಿದೆ.

 

ಕರ್ನಾಟಕದಲ್ಲಿ ಇನ್ನು ಮುಂದೆ ಅಬಕಾರಿ ಸುಂಕವು ಅಸ್ತಿತ್ವದಲ್ಲಿರುವ ಉತ್ಪಾದನಾ ವೆಚ್ಚದ 195% ರಿಂದ 205% ಕ್ಕೆ ಹೆಚ್ಚಾಗಲಿದೆ ಮತ್ತು ಎಲ್ಲಾ ಬಿಯರ್ ಬ್ರಾಂಡ್ ಗಳಿಗೆ ಹೆಚ್ಚುವರಿಯಾಗಿ ಶೇ.10 ರಷ್ಟು ಹೆಚ್ಚುವರಿ ಸುಂಕವನ್ನು ಕೂಡ ವಿಧಿಸಲಾಗುವುದು. 

 

ಹೊಸ ತೆರಿಗೆ ರಚನೆಯು ಎಲ್ಲಾ ಬಿಯರ್ ವಿಬಾಗಳಲ್ಲಿ 205% ಫ್ಲಾಟ್ ಸುಂಕದೊಂದಿಗೆ ಬದಲಾಗಲಿದೆ. ಇದರ ಜೊತೆಗೆ ವಿಸ್ಕಿ, ಬ್ರಾಂಡಿ, ಜಿನ್ ಮತ್ತು ಇನ್ನಿತರ ಆಲ್ಕೋಹಾಲ್ ಪಾನೀಯಗಳಿಗೂ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈಗಾಗಲೇ ಅಬಕಾರಿ ಇಲಾಖೆಯು ಈ ಬ್ರಾಂಡ್ ಗಳ ಬೆಲೆ ಏರಿಕೆಯ ಬಗ್ಗೆ ಅಧಿಸೂಚನೆ ಹೊರಡಿಸಿದೆ.

 

ಆದ್ದರಿಂದ, ಒಟ್ಟಾರೆಯಾಗಿ ಬಿಯರ್ ಬಾಟಲಿಗಳಿಗೆ 20 ರೂ. ರಷ್ಟು ಮತ್ತು ವಿಸ್ಕಿ, ಬ್ರಾಂಡಿ, ಜಿನ್ ಹಾಗೂ ಇನ್ನಿತರ ಬ್ರಾಂಡ್ ಗಳಿಗೆ ಪ್ರತಿ ಕ್ವಾರ್ಟರ್ ಬಾಟಲಿಗೆ ರೂ 10 ರಿಂದ ರೂ.15 ರ ವರೆಗೆ ಸಂಭಾವ್ಯ ಏರಿಕೆಯಾಗಲಿದೆ.

 

ಈ ಬೆಲೆ ಏರಿಕೆ ಕ್ರಮವು ಸರ್ಕಾರದ ಆದಾಯವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಬಕಾರಿ ಸುಂಕ ಸಂಗ್ರಹದಲ್ಲಿ 40,000 ಕೋಟಿ ರೂ. ಗಳ ಗುರಿಯನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

 

ಅಬಕಾರಿ ಇಲಾಖೆಯು ಹೊಸ ಬೆಲೆ ಏರಿಕೆಯ ಅಧಿಸೂಚನೆಯನ್ನು ಹೊರಡಿಸಿದೆ ಮತ್ತು ಏಳು ದಿನಗಳಲ್ಲಿ ಸಾರ್ವಜನಿಕರ ಆಕ್ಷೇಪಗಳನ್ನು ಆಹ್ವಾನಿಸಿದೆ. ಸಾರ್ವಜನಿಕ ಆಕ್ಷೇಪಣೆ ಮುಗಿದ ನಂತರ, ಅನುಮೋದನೆ ದೊರೆತರೆ ಏಳು ದಿನಗಳ ನಂತರ ಹೊಸ ದರಗಳು ಜಾರಿಗೆ ಬರಲಿದೆ.