ಮಂಗಳೂರು: ಅಕ್ರಮವಾಗಿ ಜಾನುವಾರುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಪತ್ತೆಹಚ್ಚಿದ್ದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಲಾರಿ ಚಾಲಕನನ್ನು ಬಂಧಿಸಲಾಗಿದೆ.
ಹಾಸನ ಜಿಲ್ಲೆಯ ಹುಣಸಿನಕೆರೆ ರೋಡ್ ನಿವಾಸಿ ಸಾಧೀಕ್ ಜಿ. (23) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬಾನ್ ಹಾಗೂ ರೆಹಮಾನ್ ಎಂಬ ಇಬ್ಬರು ವ್ಯಕ್ತಿಗಳು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಸೆಪ್ಟೆಂಬರ್ 22ರಂದು ಬೆಳಗಿನ ಜಾವ ಕಂಕನಾಡಿ ನಗರ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸಿದ್ದರಾಮ ಅವರು ರೌಂಡ್ಸ್‌ನಲ್ಲಿದ್ದ ವೇಳೆ, ಆಡ್ಯಾರು ಮಾರ್ಗವಾಗಿ ಮಂಗಳೂರು ಕಡೆಗೆ ಲಾರಿಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬೆಳಗ್ಗೆ ಸುಮಾರು 6.30ರ ವೇಳೆಗೆ ಆಡ್ಯಾರು ಕಡೆಯಿಂದ ಬರುತ್ತಿದ್ದ ಕಂದು ಬಣ್ಣದ ಐಷರ್ ಲಾರಿಯನ್ನು ಬೆನ್ನಟ್ಟಿ ಪಡೀಲ್‌ನ ಟೊಯೋಟಾ ಕಾರು ಶೋರೂಂ ಎದುರು ತಡೆದಿದ್ದಾರೆ.
ವಾಹನವನ್ನು ನಿಲ್ಲಿಸಿದ ವೇಳೆ ಚಾಲಕ ಸಾಧೀಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಲಾರಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ವಾಹನದಿಂದ ಇಳಿದು ಪರಾರಿಯಾಗಿದ್ದಾನೆ.
ಲಾರಿಯ ಹಿಂಭಾಗವನ್ನು ಹಸಿರು ಬಣ್ಣದ ಟಾರ್ಪಲಿನ್‌ನಿಂದ ಮುಚ್ಚಲಾಗಿತ್ತು. ಪರಿಶೀಲನೆ ನಡೆಸಿದಾಗ ಒಳಗೆ 17 ಜಾನುವಾರುಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಅತ್ಯಂತ ಕಿರಿದಾದ ಜಾಗದಲ್ಲಿ ಒಂದರ ಮೇಲೊಂದು ಬಿಗಿಯಾಗಿ ಕಟ್ಟಿಹಾಕಲಾಗಿತ್ತು. ಅವುಗಳ ಕತ್ತುಗಳನ್ನು ಮೇಲಕ್ಕೆತ್ತಿ ಹಗ್ಗಗಳಿಂದ ಲಾರಿಯ ಕ್ಯಾರೇಜ್‌ಗೆ ಕಟ್ಟಲಾಗಿದ್ದು, ಉಸಿರಾಡಲು ಕೂಡ ಕಷ್ಟವಾಗುವ ರೀತಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ 17 ಜಾನುವಾರುಗಳ ಜೊತೆಗೆ ಸಾಗಾಟಕ್ಕೆ ಬಳಸಿದ್ದ ಐಷರ್ ಲಾರಿ ಹಾಗೂ ಆರೋಪಿಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಷೇಧ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪರಾರಿಯಾಗಿರುವ ಸುಬಾನ್ ಮತ್ತು ರೆಹಮಾನ್ ಅವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.





