24 September 2026 |

ಶಾಲೆಯ ಮುಂಭಾಗದ ಡಿಜೆ ಸದ್ದಿನ ನಡುವೆ 2ನೇ ತರಗತಿ ಬಾಲಕಿ ಕುಸಿದು ಸಾವು

  • 23 Sep 2026 02:24:47 PM

ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಶಾಲೆಯ ಹೊರಭಾಗದಲ್ಲಿ ಮೊಳಗುತ್ತಿದ್ದ ಅಬ್ಬರದ ಡಿಜೆ ಸದ್ದಿನ ನಡುವೆ 2ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

 

ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ಸೆಪ್ಟೆಂಬರ್ 21ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಈ ಘಟನೆ ನಡೆದಿದೆ. ಶಾಲೆಯ ಮುಂಭಾಗದಿಂದ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಡಿಜೆ ಸಂಗೀತ ಹಾಕಲಾಗಿತ್ತು. ಅದರ ಶಬ್ದ ಶಾಲೆಯ ತರಗತಿಗಳ ಒಳಗೂ ಕೇಳಿಸುತ್ತಿತ್ತು. ಕೆಲವು ವಿದ್ಯಾರ್ಥಿಗಳು ಕಿಟಕಿಯ ಬಳಿ ನಿಂತು ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು.

 

ಇದೇ ವೇಳೆ ತರಗತಿಯಲ್ಲಿದ್ದ ಬಾಲಕಿಗೆ ಏಕಾಏಕಿ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕುರ್ಚಿಯ ಮೇಲೆಯೇ ಕುಸಿದುಬಿದ್ದಿದ್ದಾಳೆ. ತರಗತಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ದಾಖಲಾಗಿದೆ. ವಿಡಿಯೋದಲ್ಲಿ ಬಾಲಕಿ ಇತರ ವಿದ್ಯಾರ್ಥಿಗಳತ್ತ ಬೆರಳು ತೋರಿಸುತ್ತಾ ನಗುತ್ತಿದ್ದ ಕೆಲವೇ ಕ್ಷಣಗಳ ಬಳಿಕ ಕುಸಿದುಬೀಳುವುದು ಕಾಣಿಸಿದೆ.

 

ಬಾಲಕಿಗೆ ಸತತವಾಗಿ ಮೂರು ಬಾರಿ ಹೃದಯಾಘಾತ ಸಂಭವಿಸಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೂರನೇ ಬಾರಿ ಹೃದಯಾಘಾತವಾದ ಬಳಿಕ ಆಕೆಯ ಸ್ಥಿತಿ ಗಂಭೀರಗೊಂಡಿದ್ದು, ಅಲ್ಪ ಸಮಯದಲ್ಲೇ ಮೃತಪಟ್ಟಿದ್ದಾಳೆ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

 

ಘಟನೆಯ ನಿಖರ ಕಾರಣ ತಿಳಿಯಲು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.