23 June 2026 |

ಉಳ್ಳಾಲ : ಭೀಕರ ಮಳೆಗೆ ಇಬ್ಬರು ಚಿಕ್ಕ ಮಕ್ಕಳು ಮತ್ತು ಒಬ್ಬ ಮಹಿಳೆಯೂ ಸೇರಿದಂತೆ ಮೂವರ ದುರ್ಮರಣ : ಗುಂಡೂರಾವ್ ಗೆ ಸಿಎಂ ಆದೇಶ

  • 30 May 2025 04:59:11 PM

ಉಳ್ಳಾಲ : ಇಲ್ಲಿನ ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ಲುವಿನಲ್ಲಿ ಮಳೆಗೆ ನಡೆದ ಘೋರ ದುರಂತ ಎಲ್ಲರನ್ನು ದುಃಖದಲ್ಲಿ ಮುಳುಗಿಸಿತ್ತು. ಇಂದು ಮುಂಜಾನೆ 4.00 ಗಂಟೆಗೆ ಕಾಂತಪ್ಪ ಪೂಜಾರಿ ಎಂಬವರ ಮನೆಗೆ ಗುಡ್ಡೆ ಕುಸಿದು ಬಿದ್ದ ಪರಿಣಾಮ ಒಟ್ಟು ಮೂರು ಜೀವಗಳು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ.

 

ಈ ದುರ್ಘಟನೆಯಲ್ಲಿ ಒಟ್ಟು 6 ಜನ ಮಣ್ಣಿನ ಒಳಗಡೆ ಸಿಲುಕಿಕೊಂಡಿದ್ದರು. ಆದರೆ 3 ಜನರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಂತಪ್ಪ ಪೂಜಾರಿಯವರ ಹೆಂಡತಿ ಪ್ರೇಮ ಪೂಜಾರಿ(51) ಮತ್ತು 3 ವರ್ಷದ ಮೊಮ್ಮಗ ಆರ್ಯನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

 

ಅರುಷ್ ಎಂಬ ಚಿಕ್ಕ ಹುಡುಗನನ್ನು ಅವಶೇಷಗಳ ಅಡಿಯಿಂದ ರಕ್ಷಿಸಿದರಾದರು ಆಸ್ಪತ್ರೆಗೆ ಕೊಂಡುಹೋಗುವಾಗ ದಾರಿ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.

 

ಈ ಮೂಲಕ ಭೀಕರ ಮಳೆಗೆ ಮನೆಗೆ ಗುಡ್ಡ ಕುಸಿದು ಬಿದ್ದ ಪರಿಣಾಮ 3 ಜನರ ಪ್ರಾಣಪಕ್ಷಿ ಹಾರಿ ಹೋಗಿದೆ. ಸ್ಥಳೀಯರು ಮತ್ತು ರಕ್ಷಣಾ ದಳ ಸೇರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಮಣ್ಣಿನಲ್ಲಿ ಸಿಲುಕುಹಾಕಿಕೊಂಡ ಕಾಂತಪ್ಪ ಪೂಜಾರಿ, ಅವರ ಮಗ ಸೀತಾರಾಮ ಪೂಜಾರಿ ಮತ್ತು ಅಶ್ವಿನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ಸಿಎಂ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ತಕ್ಷಣ ಮಂಗಳೂರಿಗೆ ತೆರಳುವಂತೆ ಸೂಚಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ತಿಳಿಸಿದ್ದಾರೆ ಎಂದು ವರದಿಯಾಗಿದೆ.